ಬೆಂಗಳೂರು, ಅ.04(DaijiworldNews/AA): ಪ್ರಧಾನಿ ಮೋದಿ ಒಬ್ಬ ಸುಳ್ಳಿನ ಸರದಾರ. ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ಎಂ ರೇವಣ್ಣ ಅವರು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಭಾರತದಲ್ಲಿ ಮೀಸಲಾತಿ ಬಗ್ಗೆ ಯೋಚಿಸಬೇಕು. ಎಲ್ಲಿಲ್ಲದ ಬದಲಾವಣೆ ರಾಜ್ಯದಲ್ಲಿ ಆಗುತ್ತಿದೆ. ಕರ್ನಾಟಕದಲ್ಲಿ ದಲಿತರ ಮೀಸಲಾತಿ ಕಸಿಯಲಾಗುತ್ತಿದೆ ಎಂದು ಹರಿಯಾಣದಲ್ಲಿ ಮೋದಿ ಹೇಳಿದ್ದಾರೆ. ನಿಜವಾದ ಮೀಸಲಾತಿ ವಿರೋಧಿ ಯಾರು? ಅದು ಯಾರು ಎಂದು ಆರ್ಎಸ್ಎಸ್ಗೆ ಗೊತ್ತಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೋದಿಯವರು ಸುಳ್ಳು ಹೇಳೋದು ಬಿಡಬೇಕು. ಸುಳ್ಳಿನ ಸರಮಾಲೆಯನ್ನ ಹಾಕಿಕೊಂಡಿದ್ದಾರೆ. ಮೋದಿಯವರು ಮಾತನ್ನ ನಾವು ಖಂಡಿಸುತ್ತೇವೆ ಎಂದು ಕಿಡಿ ಕಾರಿದರು.
ಹಾವನೂರು ವರದಿ ಜಾರಿಗೆ ಬಂದಾಗಿನಿಂದ ಶೋಷಿತ ವರ್ಗಗಳಿಗೆ ಅಧಿಕಾರ ಸಿಗುತ್ತಿವೆ. ಹಾವನೂರು ವರದಿ ಹಿಂದೂಳಿದ ವರ್ಗಗಳ ಬೈಬಲ್ ಆಗಿದೆ. ಬ್ಯಾಕ್ ಲಾಗ್ ಹುದ್ದೆಗಳು ದಲಿತರಿಗೆ ಸಿಗುತ್ತಿವೆ. ಕೆಲಸ ಸಿಗುವ ಹಾಗೇ ಮಾಡಿದ್ದು ಕರ್ನಾಟಕ ಎಂದರು.