ಶಿವಮೊಗ್ಗ,ಅ.02(DaijiworldNews/TA):ಏರೋಡ್ರೋಮ್ ಮಾನದಂಡಗಳನ್ನು ಪೂರೈಸದ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಾಹಕ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) 20 ಲಕ್ಷ ದಂಡ ವಿಧಿಸಿದೆ.
ಡಿಜಿಸಿಎಯ ವರದಿಯು ವಿಮಾನ ನಿಲ್ದಾಣ ನಿರ್ವಹಣೆಯಲ್ಲಿನ ಹಲವಾರು ಲೋಪಗಳನ್ನು ಎತ್ತಿ ತೋರಿಸಿದ್ದು ಅದು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದ್ದು, ಈ ಶಿಸ್ತಿನ ಕ್ರಮಕ್ಕೆ ಕಾರಣವಾಯಿತು.
ರನ್ ವೇ ಆ್ಯಂಡ್ ಸೇಫ್ಟಿ ಏರಿಯಾ ನಿರ್ವಹಣೆ ಸಮರ್ಪಕವಾಗಿಲ್ಲ. ರನ್ ವೇನ ಟ್ರಾನ್ಸ್ವರ್ಸ್ ಭಾಗದಲ್ಲಿ ಮಣ್ಣು ಕುಸಿತ ಸೇರಿದಂತೆ ಕೆಲವು ನ್ಯೂನತೆಗಳಿದ್ದು, ನಿರ್ವಹಣೆ ಸರಿ ಇಲ್ಲ. ರನ್ ವೇ ಭಾಗದಲ್ಲಿ ಕಲ್ಲುಗಳು ಪತ್ತೆಯಾಗಿವೆ. ರನ್ ವೇ ಅಂಚಿನಲ್ಲಿ ಲೈಟ್ ಪ್ಯಾನಲ್ಗಳ ನಿರ್ವಹಣೆ ಸರಿ ಇಲ್ಲ ಎಂದು ತಿಳಿಸಲಾಗಿದೆ.
ನ್ಯೂನತೆಗಳ ಕುರಿತು ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಆ.1ರಂದು ನೊಟೀಸ್ ಜಾರಿ ಮಾಡಿತ್ತು. ಹತ್ತು ದಿನದ ಬಳಿಕ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಉತ್ತರ ನೀಡಿತ್ತು. ಆದರೆ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿ ನೋಟಿಸ್ ನೀಡಿದೆ ಎಂದು ಹೇಳಲಾಗಿದೆ.