ಬೆಂಗಳೂರು, ಅ.01(DaijiworldNews/AA): ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಪತ್ನಿ ಮುಡಾ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಂಡತಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ನನ್ನೊಂದಿಗೆ ಚರ್ಚೆ ಮಾಡಿಲ್ಲ. ಅವರ ಸಹೋದರ ನೀಡಿದ ಜಮೀನು ಅದು. ಮುಡಾದವರು ಅವರನ್ನು ಸ್ವಾಧೀನಕ್ಕೆ ಪಡೆದುಕೊಂಡು ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ವಿಜಯ ನಗರದಲ್ಲಿ ನೀಡಿದ್ದರು. ಮುಡಾಗೆ ನಾವೇನು ಅಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಅವರೇ ವಿಜಯನಗರದಲ್ಲಿ ಕೊಟ್ಟಿದ್ದರು. ಆದರೆ ಈಗ ವಿವಾದದಿಂದ ಮನನೊಂದು ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುತ್ತಿದೆ. ಹಾಗಾಗಿ ಸೈಟ್ ಬೇಡವೇ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಇಡಿ ಎಫ್ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾನೂನು ಏನಾದರೂ ಕ್ರಮ ಕೈಗೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ(ಮನಿ ಲ್ಯಾಂಡ್ರಿಗ್) ನನ್ನ ಪಾತ್ರ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದರು.
ಸೈಟ್ ವಾಪಸ್ ನೀಡಿ ತಪ್ಪು ಒಪ್ಪಿಕೊಂಡಿದ್ದಾರೆ ಅನ್ನೋ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಹೇಗೆ ತಪ್ಪು ಒಪ್ಪಿದಂತಾಗುತ್ತದೆ? ನನ್ನ ಹೆಂಡತಿ ಮನನೊಂದು ಸೈಟ್ ವಾಪಸ್ ಮಾಡಿದ್ದಾರೆ. ಬಿಜೆಪಿಗರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ತಪ್ಪೇ ಮಾಡಿಲ್ಲವಲ್ಲ ಎಂದು ಕಿಡಿ ಕಾರಿದ್ದಾರೆ.