ಮೈಸೂರು, ಸೆ.29(DaijiworldNews/AA): ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ಬಂದು ನನಗೆ, "ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ" ಅಂತಾರೆ. ನಾನು ಇದಕ್ಕೆಲ್ಲಾ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದು ಕಿಡಿ ಕಾರಿದರು.
ನಾನು ಮುಖ್ಯಮಂತ್ರಿ ಆಗಿದ್ದೇ ಅಂಬೇಡ್ಕರ್ ಅವರ ಸಂವಿಧಾನದಿಂದ. ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ 10 ಸಂಪುಟಗಳ ಭಾಷಣವನ್ನು ನಾನು ಕನ್ನಡಕ್ಕೆ ಮಾಡಿಸಿದ್ದೇನೆ. ಈ ಎಲ್ಲವನ್ನೂ ಪ್ರತಿಯೊಬ್ಬರೂ ಓದಬೇಕು ಎಂದು ಕರೆ ನೀಡಿದರು.
ದೇಶದ ಬಜೆಟ್ ಗಾತ್ರ 48 ಲಕ್ಷ ಕೋಟಿ. ಇದರಲ್ಲಿ ಅಭಿವೃದ್ಧಿಗೆ 28 ಕೋಟಿ ಖರ್ಚಾಗುತ್ತದೆ. ಇದರಲ್ಲಿ ಶೇ.24 ರಷ್ಟು ಹಣವನ್ನು ದಲಿತರ ಅಭಿವೃದ್ಧಿಗೆ ನೀಡಬೇಕಿತ್ತು. ಆದರೆ ಕೊಡುತ್ತಿರುವುದು ಕೇವಲ 60 ಸಾವಿರ ಕೋಟಿ. ಆದರೆ ನಮ್ಮ ರಾಜ್ಯದ ಅಭಿವೃದ್ಧಿ ಬಜೆಟ್ ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದ್ದೀವಿ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಭಾಗವಾಗಿ ಈ ಹಣ ಮೀಸಲು ಎಂದರು.
ಬಜೆಟ್ ನಲ್ಲಿ 59,000 ಕೋಟಿ ಹಣವನ್ನು ಗ್ಯಾರಂಟಿಗಳ ಜಾರಿಗಾಗಿ ಮೀಸಲಿಟ್ಟಿದ್ದೇನೆ. ಇಷ್ಟೂ ಹಣ ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ವರ್ಗದವರಿಗೂ ತಲುಪುತ್ತಿದೆ. ವಿರೋಧ ಪಕ್ಷಗಳು ಎಷ್ಟೇ ಸುಳ್ಳು, ಅಪಪ್ರಚಾರ ಮಾಡಿದರೂ ಈ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.