ಮುಂಬೈ, ಸೆ.27(DaijiworldNews/AA): ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ಬಾಂಗ್ಲಾದೇಶದ ನೀಲಿ ಚಿತ್ರತಾರೆ ರಿಯಾ ಬಾರ್ಡೆಯನ್ನು ಮಹಾರಾಷ್ಟ್ರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಿಯಾ ಬಾರ್ಡೆ ಬಾಂಗ್ಲಾದೇಶದ ಪ್ರಜೆಯಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ತನ್ನ ಕುಟುಂಬದೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಳು. ಈ ಪ್ರಕರಣದಲ್ಲಿ ಆಕೆಯ ತಾಯಿ, ಸಹೋದರಿ ಹಾಗೂ ತಂದೆಯ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಇನ್ನು ರಿಯಾ ಬಾರ್ಡೆಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 465, 468, 479, 24, ಮತ್ತು 140 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಾ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ ಎಂದು ಪ್ರಶಾಂತ್ ಮಿಶ್ರಾ ಎಂದು ಗುರುತಿಸಲಾದ ರಿಯಾ ಅವರ ಸ್ನೇಹಿತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ದೂರಿನ ಅನುಸಾರ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆಕೆಯ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.
ರಿಯಾ ಬರ್ಡೆ ಅವರ ತಾಯಿ ಮೂಲತಃ ಬಾಂಗ್ಲಾದವರು ಆದರೆ ಮಹಾರಾಷ್ಟ್ರದ ಅಮರಾವತಿಗೆ ಸೇರಿದ ಅರವಿಂದ ಬಾರ್ಡೆ ಅವರನ್ನು ಮದುವೆಯಾಗಿದ್ದರು. ಇದಾದ ಬಳಿಕ ಆಕೆ ತನ್ನ ರಾಷ್ಟ್ರೀಯತೆಯನ್ನು ಭಾರತೀಯ ಎಂದು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ಕೊಟ್ಟಿದ್ದರು. ಆಕೆಯ ಕುಟುಂಬದ ಸದಸ್ಯರನ್ನು ಅಂಜಲಿ ಬರ್ಡೆ ಅಲಿಯಾಸ್ ರೂಬಿ ಶೇಖ್ (ತಾಯಿ), ಅರವಿಂದ್ ಬಾರ್ಡೆ (ತಂದೆ), ರವೀಂದ್ರ ಅಲಿಯಾಸ್ ರಿಯಾಜ್ ಶೇಖ್ (ಸಹೋದರ), ಮತ್ತು ರಿತು ಅಲಿಯಾಸ್ ಮೋನಿ ಶೇಖ್ (ಸಹೋದರಿ) ಎಂದು ಗುರುತಿಸಲಾಗಿದೆ.