ಬೆಂಗಳೂರು, ಸೆ.25(DaijiworldNews/AA): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಜೆಡಿಎಸ್ನ ಬೆಂಗಳೂರು ನಗರಾಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ಮಾತನಾಡಿ, ಸಿಎಂ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ಮಾಡ್ತಿದೆ ಅಂತಾ ಹೇಳ್ತಾ ಇದ್ದಾರೆ. ಪಾದಯಾತ್ರೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿದ್ದಾರೆಂದು ಸಿಎಂ ಹೇಳಿದ್ರು. ಕೋರ್ಟ್ ಅವರ ವಿರುದ್ಧ ತೀರ್ಪು ಕೊಟ್ಟಿದೆ. ಬಿಜೆಪಿ ಜೆಡಿಎಸ್ಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಹೇಳ್ತಾ ಇದ್ರಿ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಎಂದು ಹೇಳಿದರು.
ಮುಂದುವರೆದು ರಾಜಭವನ ದುರುಪಯೋಗ ಮಾಡಿಕೊಳ್ತಾ ಇದ್ದಾರೆ ಅಂತ ಹೇಳ್ತಾ ಇದ್ರಿ. ಈಗ ನ್ಯಾಯಾಲಯ ಮುಡಾ ವಿಚಾರವಾಗಿ ತನಿಖೆ ಆಗಬೇಕು ಅಂತ ಹೇಳುತ್ತಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿ ಎಂದು ತಿಳಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.