ಬೆಂಗಳೂರು, ಸೆ.22(DaijiworldNews/AK): ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 117 ಕೋಟಿ ರೂ. ಅವ್ಯವಹಾರ ಆಗಿದ್ದು, ಇದರ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಅವ್ಯವಹಾರದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಕೂಡಲೇ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ರಾಜೀನಾಮೆ ಪಡೆಯಬೇಕು ಎಂದು ತಿಳಿಸಿದರು.ಇದೇ 24ರಂದು ಇದರ ಕುರಿತು ನಾವು ಲೋಕಾಯುಕ್ತರಿಗೆ ದೂರು ಕೊಡಲಿದ್ದೇವೆ. ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಮಾನ್ಯ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಹಗರಣ ನಡೆದಿದೆ. ರೋಗಿಗಳಿಗೆ ಆರೋಗ್ಯ ಸೇವೆಗೆ ರಾಜ್ಯದ ಹಾವೇರಿ, ಗುಲ್ಬರ್ಗ, ಕೊಪ್ಪಳ, ಯಾದಗಿರಿ, ಬೆಂಗಳೂರು, ಮೈಸೂರು ಮೊದಲಾದ 18 ವೈದ್ಯಕೀಯ ಕಾಲೇಜುಗಳಿಗೆ 114 ಮಾಡ್ಯುಲರ್ ಆಪರೇಷನ್ ಥಿಯೇಟರ್ ಉಪಕರಣಗಳನ್ನು ಖರೀದಿಸಿದ್ದು, 176.70 ಕೋಟಿ ಖರ್ಚು ಮಾಡಿದ್ದಾರೆ ಎಂದರು.
ಟೆಂಡರ್ ಕರೆಯಲು ಕಂಪೆನಿ ಹೆಸರನ್ನು ಬದಲಿಸಿದ್ದು, ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಶಿಕ್ಷಣ ಸಚಿವ, ವೈದ್ಯಕೀಯ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಈ ಹಗರಣದಲ್ಲಿ ಭಾಗವಹಿಸಿದ ದಟ್ಟವಾದ ಸುದ್ದಿ ಇದೆ. ಸರಕಾರವು ಶೇ 60 ಮತ್ತು ಸಂಬಂಧಿತ ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ಶೇ 40 ಹಣ ಭರಿಸುತ್ತಿವೆ ಎಂದು ವಿವರಿಸಿದರು.