ಬೆಂಗಳೂರು,ಸೆ.22(DaijiworldNews/AK): ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೀಡೂ ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾ ರ ಮತ್ತು ರಾಜಭವನದ ಮಧ್ಯೆ ನಡೆಯುವ ಜಟಾಪಟಿ ಬೆನ್ನಲ್ಲೇ ಇದೀಗ , 2013–18ರ ಅವಧಿಯ ವಿವರಣೆಯನ್ನು ರಾಜ್ಯಪಾಲರು ಕೇಳಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಆಯೋಗದ ವರದಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಇದೇ 11ರಂದು ಸಲ್ಲಿಸಿದೆ.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂ ಡಿದ್ದ ಜಮೀನಿನಲ್ಲಿ 540 ಎಕರೆಯನ್ನು ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ‘ರೀಡೂ’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಅಧಿವೇಶನದಲ್ಲಿಯೇ ಆರೋಪ ಮಾಡಿದ್ದರು.