ದೆಹಲಿ, ಸೆ.21(DaijiworldNews/AA): ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೊಂದೇ ನನ್ನ ಕೆಲಸ ಎಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅತಿಶಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಮೊದಲ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸಿತು, ಅವರನ್ನು 6 ತಿಂಗಳು ಜೈಲಿನಲ್ಲಿ ಇರಿಸಿತು. ಅವರನ್ನು ನಾಶ ಮಾಡಲು ಪ್ರಯತ್ನಿಸಿತು. ಆದರೆ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿತು. ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಗಿಳಿಗಳಾಗಿ ಮಾರ್ಪಟ್ಟಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಇನ್ನು ಮುಂದೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಆಗಿರುವುದಿಲ್ಲ ಎಂಬುದು ಬಹಳ ಬೇಸರದ ಸಂಗತಿ. ಆದರೆ, ಮುಂದಿನ ವರ್ಷದ ಚುನಾವಣೆಯವರೆಗೆ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ. ಮತ್ತೆ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಅರವಿಂದ್ ಕೇಜ್ರಿವಾಲ್ ಅವರೇ ಸಿಎಂ ಆಗುತ್ತಾರೆ. ಈಗ ನಮ್ಮ ಕೆಲಸವೆಂದರೆ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಸಿಎಂ ಮಾಡುವುದು ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಬಡವರಿಗೆ ವಿದ್ಯುತ್ ನೀಡಿದ ವ್ಯಕ್ತಿ. ಅವರು ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿದವರು. ಇನ್ನು 4 ತಿಂಗಳಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಸಂಕಷ್ಟದಲ್ಲಿರುವ ದೆಹಲಿ ಜನರಿಗಾಗಿ ಕೆಲಸ ಮಾಡುವುದೊಂದೇ ನನ್ನ ಕೆಲಸ. ಬಿಜೆಪಿಯವರು ಯಾವ ಕೆಲಸ ನಿಲ್ಲಿಸಿದರೋ ಆ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಈಗ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದಿದ್ದಾರೆ ಎಂದು ಅವರು ತಿಳಿಸಿದರು.