ಹುಬ್ಬಳ್ಳಿ, ಸೆ.20(DaijiworldNews/AA): ತಿರುಪತಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ. ಜೊತೆಗೆ ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ತಿಳಿಸಿದ್ದರು.