ದೆಹಲಿ, ಸೆ.20(DaijiworldNews/AA): ನಕ್ಸಲಿಸಂ ಮೂಲೋತ್ಪಾಟನೆಗೆ 2026ರ ಮಾರ್ಚ್ 31 ರಂದು ದಿನಾಂಕವನ್ನು ನಿಗದಿಪಡಿಸಲಾಗಿದೆ. ಆ ವೇಳೆಗೆ ದೇಶದಿಂದ ನಕ್ಸಲಿಸಂಗೆ ಅಂತಿಮ ವಿದಾಯ ದೊರೆಯಲಿದೆ. ಅದಕ್ಕೂ ಮೊದಲೇ ನಕ್ಸಲಿಸಂ ಕೊನೆಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚತ್ತೀಸ್ ಗಢದ ನಕ್ಸಲ್ ಬಾಧಿತರೊಂದಿಗೆ ಅಮಿತ್ ಶಾ ಅವರು ದೆಹಲಿಯಲ್ಲಿಂದು ಸಂವಾದ ನಡೆಸಿದ್ದು, ಈ ಸಂದರ್ಭ ನಕ್ಸಲ್ ಹಾವಳಿಯಿಂದ ನೊಂದವರು ತಮ್ಮ ವೇದನೆಯನ್ನು ಸಚಿವರೊಂದಿಗೆ ತೋಡಿಕೊಂಡರು. ಈ ವೇಳೆ ದೇಶದಿಂದ ನಕ್ಸಲ್ ವಾದ ಮತ್ತು ನಕ್ಸಲೀಯ ಕಲ್ಪನೆಯನ್ನು ಕಿತ್ತೊಗೆದು ಶಾಂತಿ ಸ್ಥಾಪಿಸಲಾಗುವುದು. ಬಸ್ತಾರ್ನ 4 ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ದೇಶದಲ್ಲಿ ನಕ್ಸಲ್ ವಾದವನ್ನು ಕೊನೆಗೊಳಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಶಸ್ತ್ರಾಸ್ತ್ರ ತ್ಯಜಿಸಿ ಕಾನೂನಿನ ಮುಂದೆ ಶರಣಾಗಲು ನಕ್ಸಲೀಯರಿಗೆ ಮನವಿ ಮಾಡಿದ್ದೇವೆ. ಈಶಾನ್ಯ ಮತ್ತು ಕಾಶ್ಮೀರದ ಹಲವು ಸ್ಥಳಗಳಲ್ಲಿ ಅನೇಕ ಜನರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ. ಮುಖ್ಯವಾಹಿನಿಗೆ ಸೇರದಿದ್ದರೆ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.