ದೆಹಲಿ, ಸೆ.20(DaijiworldNews/AA): ಹೈಡ್ರೋಜನ್ ಬಳಕೆಯಿಂದ ಮುಂಬರುವ ವರ್ಷಗಳಲ್ಲಿ ಸುಮಾರು 22 ಲಕ್ಷ ಕೋಟಿ ಪಳೆಯುಳಿಕೆ ಇಂಧನದ ಆಮದನ್ನು ಸುಮಾರು ನಾಲ್ಕು ಲಕ್ಷ ಕೋಟಿಗೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತ್ಯಾಜ್ಯದಿಂದ ಉತ್ಪತ್ತಿಯಾಗುವ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಮಿರಾಯ್ ಯೋಜನೆ ಪ್ರಗತಿಯಲ್ಲಿದೆ. ಜೈವಿಕ ತಂತ್ರಜ್ಞಾನದ ಬಳಕೆಯು ಕಡಿಮೆ ದರದಲ್ಲಿ ಹೈಡ್ರೋಜನ್ ಉತ್ಪಾದನೆಯನ್ನು ಅನುಮತಿಸುತ್ತದೆ ಎಂದು ಹೇಳಿದರು.
ಇನ್ನು ಭಾರತವನ್ನು ಇಂಧನ ರಫ್ತು ಮಾಡುವ ರಾಷ್ಟ್ರವನ್ನಾಗಿ ಮಾಡಲು ಪ್ರತಿ ಕಿಲೋಗ್ರಾಂಗೆ ಒಂದು ಡಾಲರ್ ದರದಲ್ಲಿ ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ಸಚಿವಾಲಯ ಹೊಂದಿದೆ ಎಂದರು.