ನವದೆಹಲಿ, ಸೆ.20 (DaijiworldNews/TA):ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ನ್ನು ಹ್ಯಾಕ್ ಮಾಡಲಾಗಿದೆ. ಅದರಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರಿಪಡಿಸುವ ಕಾರ್ಯ ಆರಂಭಿಸಿದೆ ಎಂದು ವರದಿಯಾಗಿದೆ.
ಸಂವಿಧಾನ ಪೀಠಗಳ ಮುಂದೆ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಒಳಗೊಂಡಿರುವ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಲೈವ್ ಸ್ಟ್ರೀಮ್ ಮಾಡುತ್ತಿತ್ತು.
ಇತ್ತೀಚೆಗೆ, ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣವನ್ನು ಪ್ರಸಾರ ಮಾಡಿತ್ತು. ಹಾಗು ಇನ್ನೂ ಅನೇಕ ಇತರ ವಿಚಾರಣೆಗಳ ವಿಡಿಯೋಗಳು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ. ಆದರೆ ಖದೀಮರು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ್ದಾರೆ.
ಇದೀಗ ಅಮೆರಿಕದ ಮೂಲದ ರಿಪ್ಪಲ್ ಲ್ಯಾಬ್ಸ್ ಜಾಹೀರಾತು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಪೈಕಿ ಕ್ರಿಪ್ಟೋಕರೆನ್ಸಿ, ಎಕ್ಸ್ಆರ್ಪಿ ಸೇರಿದಂತೆ ಇತರ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ರಿಪ್ಪಲ್ ಲ್ಯಾಬ್ಸ್ ವಿಡಿಯೋಗಳನ್ನು ಎಲ್ಲೆಡೆ ಪೋಸ್ಟ್ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಸುಪ್ರೀಂ ಯೂಟ್ಯೂಬ್ ವಿರುದ್ಧವೇ ಕಾನೂನು ಹೋರಾಟ ಆರಂಭಿಸಿದೆ.