ಮುಂಬೈ, ಸೆ.15(DaijiworldNews/AA): ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಇಂತಹ ನಿಲುವು ಅವರ ಸಂವಿಧಾನ ವಿರೋಧಿ ಮನಃಸ್ಥಿತಿ ತೋರಿಸುತ್ತದೆ ಎಂದು ರಾಹುಲ್ ಗಾಂಧಿ ವಿರುದ್ಧ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹರಿಹಾಯ್ದಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಆತ್ಮವನ್ನೇ ಕೆಲವರು ಮರೆತಿರುವ ಈ ಹೊತ್ತಿನಲ್ಲಿ, ಅದರ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ವಿದೇಶಿ ನೆಲದಲ್ಲಿ ನಿಂತು ಮೀಸಲಾತಿ ಸೌಲಭ್ಯವು ಅಂತ್ಯವಾಗಬೇಕು ಎಂದು ಹೇಳುತ್ತಾರೆ. ಮೀಸಲಾತಿಯನ್ನು ಕುರಿತ ಪೂರ್ವಾಗ್ರಹ ಪೀಡಿತ ಧೋರಣೆಯು ಹೊಸ ಪೀಳಿಗೆಗೂ ವ್ಯಾಪಿಸಿದಂತಿದೆ' ಎಂದು ರಾಹುಲ್ ವಿರುದ್ಧ ಕಿಡಿ ಕಾರಿದರು.
ಮೀಸಲಾತಿ ಮೆರಿಟ್ ವಿರುದ್ಧ ಅಲ್ಲ; ಅದು, ದೇಶ ಮತ್ತು ಸಂವಿಧಾನದ ಆತ್ಮ ನಕಾರಾತ್ಮಕ ಕ್ರಿಯೆಯಲ್ಲ, ಬದ್ಧತೆ. ಸಂವಿಧಾನವನ್ನು ಗೌರವಿಸುವ ಯಾರೊಬ್ಬರೂ ರಾಹುಲ್ ಗಾಂಧಿ ಅವರ ನಡೆಯನ್ನು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ರಾಹುಲ್ಗಾಂಧಿ ಅವರು, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ ಎಂದು ತಿಳಿಸಿದ್ದರು. ನಂತರದ ಮಾಧ್ಯಮವೊಂದರ ಸಂವಾದದಲ್ಲಿ, ನಾನು ಮೀಸಲಾತಿಗೆ ವಿರುದ್ಧವಾಗಿ ಇದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ. 50 ಮೀರಿ ವಿಸ್ತರಿಸಲಿದ್ದೇವೆ ಎಂದಿದ್ದರು.