ಬೆಂಗಳೂರು, ಸೆ.15(DaijiworldNews/AA): ಮುನಿರತ್ನ ಅವರ ಬಂಧನ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ. ಬಿಜೆಪಿ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಕೇಳಿದ್ದಾರೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ಪೊಲೀಸರು ಬಂಧನ ಮಾಡಿದ್ದಾರೆ. ಮಿಕ್ಕ ವಿಚಾರಗಳು ಕಾನೂನಿಗೆ ಸಂಬಂಧಪಟ್ಟಿದ್ದು. ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ಏನು ಹೇಳಲು ಹೋಗಲ್ಲ. ಯಾರೇ ತಪ್ಪು ಮಾಡಿದರೂ ತಪ್ಪೇ. ಈ ರೀತಿ ಜಾತಿ - ಜಾತಿಗಳ ಮಧ್ಯೆ ದ್ವೇಷ ಉಂಟುಮಾಡುವಂತಹದ್ದು ಸರಿಯಾ? ಜೊತೆಗೆ ಜಾತಿ ಧರ್ಮವನ್ನು ಬಹಳ ಕೀಳಾಗಿ ನೋಡುವಂತಹದ್ದು, ಮಹಿಳೆಯರಿಗೆ ಮಾಡತಕ್ಕಂತಹ ಅಗೌರವ ಯಾರು ಕೂಡ ಸಹಿಸಲು ಸಾಧ್ಯವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೆಲವರು ಇದಕ್ಕೆ ರಾಜಕೀಯ ಬಣ್ಣವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ನಾಯಕರಿಗೆ ವಿರೋಧ ಪಕ್ಷದವರಿಗೆ ಹೇಳುವುದು ಇಷ್ಟೇ. ನಾವ್ಯಾರು ಅವರನ್ನ ಬೈಯಿರಿ ಅಂತ ಹೇಳಲಿಲ್ಲ. ನಾವ್ಯಾರು ಅವರಿಗೆ ಕಮಿಷನ್ ಇಸ್ಕೊಳ್ಳಿ ಅಂತ ಹೇಳಿಲ್ಲ. ಎಲ್ಲವೂ ಕೂಡ ತೆರೆದ ಪುಸ್ತಕದಂತೆ ಬ್ಲಾಕ್ ಅಂಡ್ ವೈಟ್ ನಲ್ಲಿ ಇದೆ. ಅದಕ್ಕೆ ರಾಜಕೀಯ ಸಮರ್ಥನೆ ಮಾಡಿಕೊಳ್ಳುವುದು ಸರಿನಾ? ನಿಮ್ಮ ಜಾತಿಯನ್ನ ಜಾತಿಯ ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂತವರನ್ನ ನೀವು ಯಾವ ರೀತಿಯಾಗಿ ನೋಡ್ತಿರಿ? ಅದೇ ಕಾಂಗ್ರೆಸ್ ಪಕ್ಷದವರು ಏನಾದರೂ ಮಾಡಿದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ? ಸ್ವಲ್ಪ ಚಿಂತನೆಯನ್ನು ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲಿ ಎಂದು ಹೇಳಿದ್ದಾರೆ.