ಬೆಂಗಳೂರು, ಸೆ.13 (DaijiworldNews/AK): ಅಂಗಡಿಗಳಿಗೆ ಬೆಂಕಿ ಹಾಕಿದವರನ್ನು ಎಳೆದುಕೊಂಡು ಬಂದು ಅವರ ಮನೆ ಹರಾಜು ಹಾಕಿ ನಷ್ಟ ತುಂಬಿಸಿಕೊಡಿ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ನಾಗಮಂಗಲದ ಶ್ರೀ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಯಾವನು ಬೆಂಕಿ ಹಾಕಿದ್ದಾನೋ ಅವನನ್ನು ಮೊದಲು ಎಳೆದುಕೊಂಡು ಬನ್ನಿ. ಅವನ ಮನೆಯನ್ನು ಹರಾಜಿಗೆ ಹಾಕಿ ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದರು.
ಜನರ ತೆರಿಗೆ ದುಡ್ಡಿನಲ್ಲಿ ನಾವು ಪುಂಡತನಕ್ಕೆ ಪರಿಹಾರ ಕೊಡಬೇಕಾಗಿಲ್ಲ. ಪುಂಡತನ ಮಾಡಿದವರನ್ನು ಎಳೆದು ತನ್ನಿ ಎಂದು ಸಲಹೆ ನೀಡಿದರು.ಈ ಗಲಭೆ ಪೂರ್ವನಿಯೋಜಿತ ಎಂಬಂತೆ ಕಾಣುತ್ತಿದೆ. ಕೆಲವರ ಅಂಗಡಿಗಳನ್ನು ಗುರಿ ಮಾಡಿ ಬೆಂಕಿ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಅಂಗಡಿ, ವಾಹನಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಕಳೆದ ವರ್ಷವೂ ಕೂಡ ಇಲ್ಲಿಯೇ ಇಂಥ ಸಣ್ಣ ಅಹಿತಕರ ಘಟನೆ ಸಂಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಸರಕಾರ ಈ ಸಾರಿ ಇದರ ಕಡೆ ಹೆಚ್ಚಿನ ಗಮನ ಕೊಡಬೇಕಿತ್ತು. ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸರಿಯಾದ ರಕ್ಷಣೆ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸರಕಾರ ಯಾಕೆ ಆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದ ಅವರು, ಪೊಲೀಸರು ಸಾಕಷ್ಟಿದ್ದು, ಅವರನ್ನು ಬೆಳ್ಳೂರು ಕ್ರಾಸ್ಗೆ ಕಳುಹಿಸಿದ ಬಗ್ಗೆ ಇಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೆ ಕಾರಣ ಯಾರು? ಯಾಕೆ? ಎಂದು ಪ್ರಶ್ನೆಯನ್ನು ಮುಂದಿಟ್ಟರು