ನವದೆಹಲಿ, ಸೆ.13 (DaijiworldNews/TA):ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಶ್ರೀ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಮನೀಶ್ ಸಿಸೋಡಿಯಾ ಜಾಮೀನು ತೀರ್ಪಿನ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಈ ನಿರ್ಧಾರವು "ಸುಳ್ಳು ಮತ್ತು ಪಿತೂರಿಗಳ" ವಿರುದ್ಧ ಸತ್ಯದ ವಿಜಯವನ್ನು ಗುರುತಿಸಿದೆ ಎಂದು ಹೇಳಿಕೆ ನೀಡಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಈ ತೀರ್ಪನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಸ್ವಾಗತಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಮನೀಶ್ ಸಿಸೋಡಿಯಾ ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ.
"ಇಂದು ಮತ್ತೊಮ್ಮೆ ಸತ್ಯವು ಸುಳ್ಳು ಮತ್ತು ಪಿತೂರಿಗಳ ವಿರುದ್ಧದ ಹೋರಾಟದಲ್ಲಿ ಗೆದ್ದಿದೆ, 75 ವರ್ಷಗಳ ಹಿಂದೆ ಸರ್ವಾಧಿಕಾರಿ ವಿರುದ್ಧ ಸಾಮಾನ್ಯ ಜನರನ್ನು ಬಲಪಡಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ಅವರ ಚಿಂತನೆ ಮತ್ತು ದೂರದೃಷ್ಟಿಗೆ ನಾನು ಮತ್ತೊಮ್ಮೆ ನನ್ನ ಗೌರವವನ್ನು ಸಲ್ಲಿಸುತ್ತೇನೆ" ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21, 2024 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಆರು ತಿಂಗಳ ಜೈಲುವಾಸದ ನಂತರ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧಮುಕ್ತರಾಗಿದ್ದಾರೆ. ಪಕ್ಷದ ಸದಸ್ಯರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.