ಬೆಂಗಳೂರು, ಸೆ.10(DaijiworldNews/AA): ಎಸ್ಐಟಿಯು ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಇರುವುದು, ನಾಗೇಂದ್ರರನ್ನು ತನಿಖೆಗೆ ಒಳಪಡಿಸದೆ ಇರುವುದು ಗಮನಿಸಿದಾಗ ವಾಲ್ಮೀಕಿ ನಿಗಮದ ಇಡೀ ಹಗರಣವನ್ನು ಮುಚ್ಚಿ ಹಾಕುವ ಸಂಚನ್ನು ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಮಾಡಿದಂತಿದೆ. ಇಲ್ಲವಾದರೆ ಎಸ್ಐಟಿ ಮತ್ತು ಇ.ಡಿ. ಚಾರ್ಜ್ ಶೀಟಿಗೆ ಹೀಗೆ ಅಜಗಜಾಂತರ ಇರಲು ಹೇಗೆ ಸಾಧ್ಯ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನಾಗೇಂದ್ರರ ಮೌಖಿಕ ಸೂಚನೆಯ ಕುರಿತು ತಿಳಿಸಿದ್ದೆವು. ಚುನಾವಣೆಗೆ ಹಣ ಬಳಕೆ, ಬಾರ್ ಗಳಿಗೆ ಹಣ ಹೋಗಿರುವುದರ ಕುರಿತು ಆರೋಪಿಸಿದ್ದೆವು. ನೆಕ್ಕುಂಟಿ ನಾಗರಾಜ್ ಮತ್ತು ಸಿದ್ದರಾಮಯ್ಯನವರಿಗೆ ಇರುವ ಸಂಬಂಧ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ- ನೆಕ್ಕುಂಟಿ ಸಂಬಂಧ ಬಗ್ಗೆಯೂ ಕೂಡ ಫೋಟೊ ಸಹಿತ ಬೆಳಕು ಚೆಲ್ಲಿದ್ದೆವು. ಎನ್ಐಟಿ ಚಾರ್ಜ್ ಶೀಟಿನಲ್ಲಿ ನಾಗೇಂದ್ರ- ಬಸನಗೌಡ ದದ್ದಲ್ ಹೆಸರೇ ಇಲ್ಲ ಎಂದು ಆಕ್ಷೇಪಿಸಿದರು.
ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಆರೋಪ ಮುಕ್ತವಾಗಲು ಮತ್ತು ಕ್ಲೀನ್ ಚಿಟ್ ಪಡೆಯಲು ಎಸಿಬಿಯನ್ನು ಬಳಸಿಕೊಂಡಿತ್ತು. ಅದೇ ಥರ ಎನ್ಐಟಿಯನ್ನು ಬಳಸಿಕೊಂಡದ್ದು ವ್ಯಕ್ತವಾಗುತ್ತಿದೆ. ಇ.ಡಿ. ಚಾರ್ಜ್ ಶೀಟಿನಲ್ಲಿ ಹಣದ ಬಳಕೆ, ಮಾಸ್ಟರ್ ಮೈಂಡ್ ಯಾರೆಂಬ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ, ಸತ್ಯನಾರಾಯಣವರ್ಮ ಎಲ್ಲರೂ ಸೇರಿ ಸಂಚು ನಡೆಸಿದ್ದಾಗಿ ಹೇಳಿದ್ದಾರೆ ಎಂದರು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕೆಂದು ತಿಳಿಸಿದರು.