ನವದೆಹಲಿ, ಸೆ.8(DaijiworldNews/AA): ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆ ಹಲವು ಐರೋಪ್ಯ ದೇಶಗಳ ಉಡುಪು ಕಂಪನಿಗಳು ಭಾರತೀಯ ಗಾರ್ಮೆಂಟ್ಸ್ ಉದ್ದಿಮೆಗಳತ್ತ ಮುಖ ಮಾಡುತ್ತಿದೆ. ಭಾರತೀಯ ಕಂಪನಿಗಳಿಗೆ ಆರ್ಡರ್ಸ್ ಬರುವುದು ಹೆಚ್ಚಾಗಿದ್ದು, ತಿರುಪ್ಪೂರ್, ನೋಯ್ಡಾದ ಗಾರ್ಮೆಂಟ್ಸ್ ಉದ್ಯಮಗಳಿಗೆ ವಿದೇಶಗಳಿಂದ ಆರ್ಡರ್ಸ್ ಬರುವ ಪ್ರಮಾಣ ಹೆಚ್ಚಾಗಿದೆ.
ಕಳೆದ ಎರಡು ವಾರಗಳಿಂದ ತಿರುಪ್ಪೂರ್ನ ಜವಳಿ ಉದ್ಯಮಕ್ಕೆ ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಪೋಲ್ಯಾಂಡ್ ದೇಶಗಳ ಸುಪ್ರಸಿದ್ಧ ಉಡುಪು ಬ್ರ್ಯಾಂಡ್ಗಳು 450 ಕೋಟಿ ರೂ ಮೊತ್ತದ ಬಟ್ಟೆಗಳಿಗೆ ಆರ್ಡರ್ಸ್ ನೀಡಿದೆ. ಕೆಐಕೆ, ಝೀಮ್ಯಾನ್, ಪೆಪ್ಕೋ ಮೊದಲಾದ ಅಂತಾರಾಷ್ಟ್ರೀಯ ಉಡುಪು ಮಾರಾಟಗಾರರು ತುರ್ತಾಗಿ ಡೆಲಿವರಿ ಬೇಕೆಂದು ತಿರುಪ್ಪೂರ್ನ ಗಾರ್ಮೆಂಟ್ ಉದ್ದಿಮೆಗಳಿಗೆ ಆರ್ಡರ್ಸ್ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಒಂದೊಂದು ಉಡುಪಿನ ಬೆಲೆ 3 ಡಾಲರ್ ಇದೆ. ಅಂದರೆ ಸುಮಾರು 250 ರೂ ಮೌಲ್ಯದ ಬಟ್ಟೆಗಳನ್ನು ತಯಾರಿಸಿಕೊಡಬೇಕಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದೊಳಗೆ ಈ ಬಟ್ಟೆಗಳ ಡೆಲಿವರಿ ಆಗಬೇಕಿದೆ. ಇನ್ನು ಬಾಂಗ್ಲಾದೇಶದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು ಭಾರತಕ್ಕೆ ತುಸು ಲಾಭ ತಂದಂತಾಗಿದೆ.