ಹಾಸನ(ಸಕಲೇಶಪುರ) , ಸೆ.6(DaijiworldNews/AK):ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026-27 ರೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಅವರು ಇಂದು ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಯನ್ನು ಚಿಕ್ಕಬಳ್ಳಾಪುರದಲ್ಲಿ ತಾನೇ ನಿರ್ವಹಿಸಿ, ಇಂದು ಮೊದಲನೇ ಹಂತದ ಯೋಜನೆಯನ್ನು ಸಂತೋಷದಿಂದ ಉದ್ಘಾಟಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ಯೋಜನೆಯ ಪರಿಷ್ಕೃತ ಅಂದಾಜು 23252 ಕೋಟಿ ರೂ.ಗಳಾಗಿದ್ದು, ಇದುವರೆಗೆ 16152ಕೋಟಿ ರೂ.ಗಳನ್ನು ವೆಚ್ಚ ವಾಗಿದ್ದು, ಇನ್ನುಳಿದ 6-7 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಸಕಲೇಶಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು,ಯೋಜನೆಗೆ ಇಲ್ಲಿನ ನೀರು ಬಳಸಿಕೊಳ್ಳಲಾಗುತ್ತಿದೆ. ಈ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುವ ಬೇಡಿಕೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನೀರು ಕೊರತೆಯಿರುವ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದಾಗಿದ್ದು, ರಾಜ್ಯದ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದರು.