ಬೆಂಗಳೂರು , ಸೆ.02 (DaijiworldNews/AK): ಅಕ್ರಮವಾಗಿ ಸಿಕ್ಕಿದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೀರಿ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳಿಗೆ ಸಮಾನಾಂತರ ಬಡಾವಣೆಯಲ್ಲಿ ಸೈಟ್ ಸಿಕ್ಕಿದ್ದಲ್ಲ. ಬಹಳ ದೊಡ್ಡ ಮಟ್ಟದಲ್ಲಿ ಬೆಲೆಬಾಳುವ ನಿವೇಶನಗಳಿರುವ ಬಡಾವಣೆ ಅದಾಗಿದೆ. ಚದರಡಿಗೆ 1 ಸಾವಿರ ರೂ. ಸಿಗುವ ಜಾಗ ಬಿಟ್ಟು 10 ಸಾವಿರದಿಂದ 12 ಸಾವಿರ ರೂ.ಗೆ ಚದರಡಿ ಇರುವಂಥ ಪ್ರದೇಶದಲ್ಲಿ ಸೈಟ್ ಪಡೆದುದು ಅಕ್ರಮ ಎಂದು ತಿಳಿಸಿದರು.
ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂಬ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮತ್ತು ಮೂಢರನ್ನಾಗಿ ಮಾಡುವಂಥದ್ದು ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಇನ್ನೂ ಯಾಕೆ ನ್ಯಾಯಾಲಯದ ತೀರ್ಪನ್ನು ಕಾಯುತ್ತಿದ್ದಾರೆ? ನಿಮಗೇನಾದರೂ ಆತ್ಮಗೌರವ ಇದ್ದರೆ, ಕಾನೂನು, ನಿಯಮದ ಕುರಿತು ಗೌರವ ಇದ್ದಲ್ಲಿ, ಸಂವಿಧಾನದ ಕುರಿತು ಗೌರವ ಇರುವುದಾದರೆ, ಮುಖ್ಯಮಂತ್ರಿಗಳ ಸ್ಥಾನದ ಘನತೆ ಕಾಪಾಡುವುದಾದರೆ ಈ ಕೂಡಲೇ ರಾಜೀನಾಮೆ ಕೊಡಬೇಕು. ಅದಕ್ಕಿಂತ ಮೊದಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ವಜಾ ಮಾಡಿ ಎಂದು ಒತ್ತಾಯಿಸಿದರು.