ಕೋಲ್ಕತ್ತಾ, ಸೆ.03 (DaijiworldNews/AK): ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದ್ಯಾಂತ ಕಿಚ್ಚು ಹೊತ್ತಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಎರಡು ದಿನಗಳ ವಿಶೇಷ ಅಧಿವೇಶನ ಕರೆದಿದ್ದು ಸದನದಲ್ಲಿ ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಿದೆ.
ಅತ್ಯಾಚಾರ ವಿರೋಧಿ ಮಸೂದೆಯನ್ನು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಮಂಡಿಸಿದರು. ಪ್ರಸ್ತಾವಿತ ಮಸೂದೆಯಲ್ಲಿ, ಅತ್ಯಾಚಾರ ಮತ್ತು ಬಲಿಪಶುವಿನ ಮರಣದ ತಪ್ಪಿತಸ್ಥರಿಗೆ ಮರಣ ದಂಡನೆಯನ್ನು ನೀಡಲು ಅವಕಾಶವಿದೆ. ಇದಲ್ಲದೆ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ತಪ್ಪಿತಸ್ಥರಿಗೆ ಜಾಮೀನು ರಹಿತ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮಸೂದೆಯ ಮೇಲಿನ ಚರ್ಚೆಯ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಈ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಅತ್ಯಾಚಾರ ಎಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು. ಮಸೂದೆಗೆ ಒಪ್ಪಿಗೆ ನೀಡುವಂತೆ ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಒತ್ತಾಯಿಸುವಂತೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದರು.