ಬೆಂಗಳೂರು, ಸೆ.03 (DaijiworldNews/AK): ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿರುವ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಶೇ . 50:50ರ ಅನುಪಾತದಲ್ಲಿ ಪೂರ್ವಾನ್ವಯವಾಗಿ ನಿವೇಶನ ಪಡೆಯುವುದು ನಿಯಮಬಾಹಿರ ಎಂದು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ತಾಂತ್ರಿಕ ಸಮಿತಿ ಕಳೆದ 3-11-2023ರಂದೇ ಕಾಂಗ್ರೆಸ್ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮುಡಾದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು ಎಂದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ರಕ್ಷಣೆಯ ಪ್ರತೀಕವೆಂಬಂತೆ ಧೂಳು ಹಿಡಿದು ಕುಳಿತಿದ್ದ ತಾಂತ್ರಿಕ ಸಮಿತಿಯ ತನಿಖಾ ವರದಿಯ ಪ್ರತಿಯನ್ನು ನಾವು ಬಿಡುಗಡೆ ಮಾಡಿದ ನಂತರ ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿಗಳಲ್ಲೊಬ್ಬರಾದ ಹಿಂದಿನ ಆಯುಕ್ತ ಜಿ. ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಸರ್ಕಾ ರ ಈ ಕೂಡಲೇ 50:50 ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇ ಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ ಎಂದು ಹೇಳಿದರು.