ಬೆಂಗಳೂರು, ಸೆ.3(DaijiworldNews/AA): ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ. ಅವರು ಬಿಜೆಪಿಯಿಂದಲೇ ರಾಜ್ಯಪಾಲರು ಆಗಿರಬಹುದು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಸಾಂವಿಧಾನಿಕ ಹುದ್ದೆ ಮೇಲೆ ಗೌರವ ಇಲ್ಲವಾ? ಸಂವಿಧಾನದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದ್ರೆ ಅವರು ಎಲ್ಲಿ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೆ? ನನ್ನಂತ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಇದು ಯಕ್ಷಪ್ರಶ್ನೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಎಂದು ಕೇಳಿಕೊಂಡಿದ್ದೆವು. ಆದರೆ ಅವರು ಕೊಡಲಿಲ್ಲ. ಮೈಸೂರಿನ ಮುಡಾದ 14 ಸೈಟ್ ಬಗ್ಗೆ ರಾಜ್ಯಪಾಲರಿಗೆ ಕಾಳಜಿ ಹೆಚ್ಚು. ಆದರೆ ಕೋವಿಡ್ನಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಮೈಕಲ್ ಕುನ್ನಾ ಅವರ ವರದಿಯಲ್ಲಿ ಅಕ್ರಮ ಆಗಿದೆ ಎಂದು ಹೇಳಲಾಗಿದೆ. ಯಾಕೆ ಸಾವಿರಾರು ಜೀವಕ್ಕೆ ಬೆಲೆ ಇಲ್ಲವಾ? ಇದರ ಬಗ್ಗೆ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬಾರದಾ? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರಿಗೆ ಸಾವಿರಾರು ಜನ ಸತ್ತರು ಪರವಾಗಿಲ್ಲ. ಇದರ ಬಗ್ಗೆ ಯಾಕೆ ಅವರು ಮಾತಾಡ್ತಿಲ್ಲ. ಇದು ಬಿಜೆಪಿ ಅವರ ದ್ವೇಷದ ರಾಜಕೀಯ. ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದು ಕಿಡಿ ಕಾರಿದ್ದಾರೆ.