ಬೆಂಗಳೂರು, ಸೆ.2(DaijiworldNews/AA): ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ದೂರುದಾರೆ ಸಂತ್ರಸ್ತೆ ತಾಯಿ ಸಾವಿನ ಬಗ್ಗೆ ಅನುಮಾನಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಅವರು ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡಿದ್ದ ಮಹಿಳೆಯ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಬೇಕು. ಜೊತೆಗೆ ಮಹಿಳೆಯ ಅನುಮಾನಾಸ್ಪದ ಸಾವು ಹಾಗೂ ಅಂತ್ಯಸಂಸ್ಕಾರದ ಕುರಿತು ವರದಿ ಸಲ್ಲಿಸಬೇಕು ಎಂದು ಬೆಂಗಳೂರು ಪೊಲೀಸರಿಗೆ ಮಹಿಳಾ ಆಯೋಗ ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಅವರು, ಪ್ರಕರಣದ ತನಿಖೆಯ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಪತ್ರ ಬರೆದಿದ್ದೇನೆ. ಪ್ರಕರಣದಲ್ಲಿ ಮಾಜಿ ಸಿಎಂ ಆಗಿರಲಿ ಜನ ಸಾಮಾನ್ಯರೇ ಇರಲಿ. ತಪ್ಪು ಮಾಡಿದ್ದರೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಹಿಳೆ ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದಷ್ಟೆ ಮಹಿಳೆಯ ಪುತ್ರಿ ಭೇಟಿಯಾಗಿದ್ದರು. ಕ್ಯಾನ್ಸರ್ನಿಂದ ದಿಢೀರ್ ಸಾವು ಹೇಗೆ ಉಂಟಾಗುತ್ತೆ ಎಂಬುವುದೇ ಪ್ರಶ್ನೆ? ಮಹಿಳೆ ಶವ ಹಸ್ತಾಂತರ ವೇಳೆಯೂ ಹಲವು ಲೋಪಗಳು ಉಂಟಾಗಿವೆ. ಇದೆಲ್ಲಾ ವಿಚಾರಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿವೆ. ಮಹಿಳೆ ಸಾವಿನ ಬಗ್ಗೆ ಸಂತ್ರಸ್ತೆ ಕುಟುಂಬದವರು ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಿದರು.