ಬೆಂಗಳೂರು, ಸೆ.1(DaijiworldNews/AA): ಅತ್ಯಂತ ಕಡಿಮೆ ಅವಧಿಯಲ್ಲಿ ಈ ದುಷ್ಟ ಕಾಂಗ್ರೆಸ್ ಸರಕಾರವು ರಾಜ್ಯದ ಜನರ ವಿಶ್ವಾಸ, ಜನಪ್ರಿಯತೆಯನ್ನು ಕಳೆದುಕೊಂಡಿದೆ. ಕಳೆದ 2 ತಿಂಗಳುಗಳಿಂದ ರಾಜ್ಯದಲ್ಲಿ ಆಡಳಿತ ಪಕ್ಷ ಇದೆ ಎಂಬುದನ್ನು ಜನರು ಮರೆತು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮೂಡದಲ್ಲಿ ಪ್ರತಿ ಹಂತದಲ್ಲೂ ಕೂಡ ಸಿದ್ದರಾಮಯ್ಯನವರ ನಾಮಬಲದ ಮೇಲೆ ಎಲ್ಲವೂ ಅಕ್ರಮವಾಗಿ ನಡೆದುಕೊಂಡು ಹೋಗಿದೆ. ಅಲ್ಲದೆ, ಶೇ 50:50 ಅನುಪಾತದಲ್ಲೇ ತಮ್ಮ ಪತ್ನಿಗೆ ನಿವೇಶನಗಳು ಲಭಿಸಿವೆ. ಬಿಜೆಪಿ ಸರಕಾರದ ಅವಧಿಯಲ್ಲೇ ಅದು ಆಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರಕಾರ ಇದ್ದಾಗ ಶೇ 50:50 ಅನುಪಾತದಲ್ಲಿ ನಿವೇಶನ ನೀಡಲು ಒಪ್ಪಿಗೆ ಕೊಟ್ಟಿರಲಿಲ್ಲ. ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಿದ್ದರಾಮಯ್ಯನವರ ಕುಟುಂಬಕ್ಕೆ ಖುಷಿ ಪಡಿಸಲು ಅಕ್ರಮವಾಗಿ ಇದೆಲ್ಲವನ್ನೂ ಮಾಡಿದ್ದಾರೆ. ರಾಜ್ಯದಲ್ಲಿ ಒಂದು ಕಡೆ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಜೊತೆಗೇ ಹಗರಣಗಳೂ ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ ಇವುಗಳಲ್ಲಿ ಪ್ರಮುಖವಾದವು ಎಂದರು.
ನಮ್ಮದು ಕಾಟಾಚಾರದ ಹೋರಾಟವಲ್ಲ. ಒಂದು ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಕೇವಲ ವಿರೋಧಿಸಲು ಹೋರಾಟ ಕೈಗೆತ್ತಿಕೊಂಡಿಲ್ಲ. ಹೊಸ ಸರಕಾರ ಬಂದಾಗ ಒಂದು ವರ್ಷ ಕಾಲಾವಕಾಶ ಕೊಡಬೇಕಾಗುತ್ತದೆ. ಎಷ್ಟೇ ಅನುಭವವಿದ್ದರೂ ಸರಕಾರ ಸರಿಯಾದ ಹಾದಿಯಲ್ಲಿ ನಡೆಯಲು ಸಮಯ ಬೇಕಾಗುತ್ತದೆ. ಅದರರ್ಥ ಭ್ರಷ್ಟಾಚಾರದಲ್ಲಿ ಮುಳುಗಬೇಕು ಎಂದಲ್ಲ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರೀ, ಕಾನೂನು ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಲಕ್ಷ್ಮಣ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯರಾದ ಟಿ.ಎಸ್.ವಿಶ್ವನಾಥ, ಯಶವಂತ, ವೀಣಾ ಅರುಣ, ಬಿ.ವಿ.ಶ್ರೀನಿವಾಸ, ರಮೇಶ್ ಎಸ್. ಸುಲ್ತಾನ್ಪುರ್, ಜಿಲ್ಲಾ ಸಂಚಾಲಕರು, ಸಹ ಸಂಚಾಲಕರು, ಕಾನೂನು ಪ್ರಕೋಷ್ಠದ ಆಹ್ವಾನಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.