ಬೆಂಗಳೂರು, ಸೆ.1(DaijiworldNews/AA): ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಅವರು ಗೌರಿ ಹಬ್ಬದಂದು ಉದ್ಘಾಟಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಗಾಗಿ ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ ಎಂದು ಹೇಳಿದರು.
ಈಗಾಗಲೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೇನೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿದೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟೆಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್ಗಳು ನೀರನ್ನು ಎತ್ತುತ್ತಿವೆ ಎಂದು ಸ್ಪಷ್ಟಪಡಿಸಿದರು.
ಜನ ಈಗಾಗಲೇ ಈ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಜಾಗ ಕಿರಿದಾಗಿರುವ ಕಡೆ ಪೊಲೀಸರಿಗೆ ಹೇಳಿ ಜನರು ನೀರು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಿದ್ದೇವೆ. ಈ ಪವಿತ್ರ ಕಾರ್ಯಕ್ಕೆ ಎಲ್ಲರೂ ಸಾಕ್ಷಿಯಾಗಬೇಕು ಎಂದರು.