ವಿಜಯವಾಡ, ಸೆ.1(DaijiworldNews/TA):ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ, ಗುಂಟೂರು ಜಿಲ್ಲೆಯಲ್ಲಿ ಶನಿವಾರ ಪ್ರಯಾಣಿಸುತ್ತಿದ್ದ ಕಾರು ತುಂಬಿ ಹರಿಯುವ ಹೊಳೆಯಲ್ಲಿ ಕೊಚ್ಚಿಹೋಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಘಲ್ರಾಜಪುರಂ ಕಾಲೋನಿಯ ಸುನ್ನಪುಬಟ್ಟಿ ಕೇಂದ್ರದಲ್ಲಿ ಬೆಳಗ್ಗೆ 7.15ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಗುಡ್ಡದ ಮೇಲಿಂದ ಭಾರೀ ಗಾತ್ರದ ಕಲ್ಲುಗಳು ಮನೆಗಳ ಮೇಲೆ ಬಿದ್ದಿವೆ. "ಒಂದು ಮನೆ ಸಂಪೂರ್ಣ ನಾಶವಾಗಿದ್ದು, ಒಳಗಿದ್ದ ನಾಲ್ವರು ಸಾವನ್ನಪ್ಪಿದ್ದಾರೆ, ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ" ಎಂದು ವಿಜಯವಾಡ ಪೊಲೀಸ್ ಕಮಿಷನರೇಟ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಗಲರಾಜಪುರಂನಲ್ಲಿ ಭೂಕುಸಿತದಿಂದ ಐವರು ಸಾವನ್ನಪ್ಪಿದ್ದಾರೆ ಎಂದು ವಿಜಯವಾಡ ಮುನ್ಸಿಪಲ್ ಕಮಿಷನರ್ ಎಚ್ಎಂ ಧ್ಯಾನಚಂದ್ರ ತಿಳಿಸಿದ್ದಾರೆ. ಮೃತರನ್ನು ಎಂ ಮೇಘನಾ (25), ಬೋಲೆಂ ಲಕ್ಷ್ಮಿ (49), ಲಾಲು (20) (ಬಿಹಾರ ಮೂಲದ ಕಾರ್ಮಿಕ ಎಂದು ಅಂದಾಜಿಸಲಾಗಿದೆ) ಮತ್ತು ಅನ್ನಪೂರ್ಣ (55) ಎಂದು ಗುರುತಿಸಲಾಗಿದೆ. ಭೂಕುಸಿತದಲ್ಲಿ ಗಾಯಗೊಂಡ ಇತರ ಆರು ಮಂದಿ ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.