ಮಧ್ಯಪ್ರದೇಶ, ಸೆ.1(DaijiworldNews/AA):ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದೆದಂರೆ ಕಡಿಮೆ ಸಾಧನೆಯಲ್ಲ. ಅದರಲ್ಲೂ ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಂತೂ ಇನ್ನೂ ಕಠಿಣ. ಹೀಗೆ ತನ್ನ ಜೀವನದ ಎಲ್ಲಾ ಅಡೆತಡೆಗಳನ್ನು ಬದಿಗೊಡ್ಡಿ ಐಎಎಸ್ ಅಧಿಕಾರಿಯಾದ ಸವಿತಾ ಪ್ರಧಾನ್ ಅವರ ಯಶೋಗಾಥೆ ಇದು.
ಸವಿತಾ ಅವರು ಮಧ್ಯಪ್ರದೇಶದ ಮಂಡೈ ಗ್ರಾಮದಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದವರು. ಸವಿತಾ ಅವರ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಯಿತು. ಶಾಲೆಯ ಸಮಯದಲ್ಲಿ ಅವರಿಗೆ ಬರುತ್ತಿದ್ದ ವಿದ್ಯಾರ್ಥಿವೇತನದಿಂದಾಗಿ ಶಿಕ್ಷಣ ಮುಂದುವರೆಸಿದರು. ತನ್ನ ಎಲ್ಲಾ ಅಡೆತಡೆಗಳ ನಡುವೆಯೂ 10 ನೇ ತರಗತಿಯನ್ನು ಪೂರ್ಣಗೊಳಿಸಿದರು. ಈ ಮೂಲಕ ತನ್ನ ಹಳ್ಳಿಯನ್ನು 10ನೇ ತರಗತಿಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
10 ನೇ ತರಗತಿ ಮುಗಿದ ನಂತರ, ಸವಿತಾ ಅವರನ್ನು 7 ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಸೇರಿದರು. ಮಗಳ ನಿತ್ಯದ ಬಸ್ ದರಕ್ಕಾಗಿ ಸವಿತಾ ಅವರ ತಾಯಿ ಸಣ್ಣ ಉದ್ಯೋಗಕ್ಕೆ ಸೇರಿದರು. ಬಳಿಕ ಅವರ ಇಡೀ ಕುಟುಂಬವೇ ಸವಿತಾ ಅವರು ಓದುತ್ತಿದ್ದ ಹೊಸ ಶಾಲೆ ಇರುವ ಹಳ್ಳಿಗೆ ಸ್ಥಳಾಂತರಗೊಂಡಿತು. ಅಲ್ಲಿ ಸವಿತಾ ವೈದ್ಯೆಯಾಗುವ ಕನಸು ಹೊತ್ತು ವಿಜ್ಞಾನ ವಿಷಯವನ್ನು ತೆಗೆದುಕೊಂಡರು.
ಸವಿತಾ ಅವರ ಪದವಿಪೂರ್ವ ವಿದ್ಯಾಭ್ಯಾಸ ಮುಗಿಯುವ ಹಂತಕ್ಕೆ ಬಂದಿರುವಾಗಲೇ ಶ್ರೀಮಂತ ಮನೆತನದವರಿಂದ ಮದುವೆ ಪ್ರಸ್ತಾಪ ಬಂದಿತ್ತು. ಆಗ ಸವಿತಾ ಅವರಿಕೆ ಕೇವಲ 16 ವರ್ಷ. ಮದುವೆಯಾದ ನಂತರ ಸವಿತಾ ಅವರನ್ನು ಅತ್ತೆ ಸರಿಯಾಗಿ ನೋಡಿಕೊಳ್ಳದೇ ಹಿಂಸೆ ನೀಡುತ್ತಿದ್ದರು. ಅತ್ತೆಯ ಜೊತೆಗೆ ಸವಿತಾ ಅವರ ಪತಿಯೂ ಹಲ್ಲೆ ಮಾಡುವುದರೊಂದಿಗೆ ಕೊಲೆ ಬೆದರಿಕೆ ಹಾಕುತ್ತಿದ್ದರು. ಇನ್ನು ಈ ನಡುವೆ ಸವಿತಾ ಅವರಿಗೆ ಎರಡು ಮಕ್ಕಳಾಗಿತ್ತು. ಆದರೂ ಸವಿತಾ ಅವರಿಗೆ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳ ನೀಡಲಾಗುತ್ತಿತ್ತು.
ಈ ಎಲ್ಲಾ ಚಿತ್ರಹಿಂಸೆಯನ್ನು ಸಹಿಸಲಾಗದೇ ಸವಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಆದರೆ ತನ್ನ ಬಗ್ಗೆ ಖಾಳಜಿ ವಹಿಸದವರಿಗಾಗಿ ತಾನು ಪ್ರಾಣವನ್ನು ತ್ಯಜಿಸಬಾರದೆಂದು, ತನ್ನ ಇಬ್ಬರು ಮಕ್ಕಳೊಂದಿಗೆ ಹಾಗೂ 2,700 ರೂ.ಯೊಂದಿಗೆ ಮನೆ ಬಿಡುತ್ತಾರೆ. ಬಳಿಕ ಜೀವನೋಪಾಯಕ್ಕಾಗಿ ಬ್ಯೂಟಿ ಸಲೂನ್ ನಡೆಸುವುದರೊಂದಿಗೆ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದಳು. ಸವಿತಾ ಅವರಿಗೆ ಆಕೆಯ ಹೆತ್ತವರು ಹಾಗೂ ಒಡಹುಟ್ಟಿದವರು ಬೆಂಬಲ ನೀಡಿದರು.
ನಂತರ ಸವಿತಾ ಅವರು ಭೋಪಾಲ್ನ ಬರ್ಕತುಲ್ಲಾ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಬಿಎಗೆ ವ್ಯಾಸಂಗ ಮಾಡಿ ಅದರಲ್ಲಿ ಅಗ್ರಸ್ಥಾನ ಗಳಿಸಿದರು. ಬಳಿಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು. ನಂತರ ಸವಿತಾ ಅವರು 24 ನೇ ವಯಸ್ಸಿನಲ್ಲಿ ಮುಖ್ಯ ಪುರಸಭೆಯ ಅಧಿಕಾರಿಯಾಗಿ ನೇಮಕಗೊಂಡರು. ಈ ನಡುವೆ ವಿಚ್ಛೇದನದ ಪಡೆದ ಅವರು, ಬಳಿಕ ಮತ್ತೋರ್ವರನ್ನು ಪ್ರೀತಿಸಿ ಮದುವೆಯಾದರು.