ಅಹಮದಾಬಾದ್, ಆ.31(DaijiworldNews/AA): ಹೆತ್ತ ತಾಯಿಯನ್ನೇ ಕೊಂದು ನಂತರ ಆಕೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕ್ಷಮಿಸಿ ಬಿಡು ಅಮ್ಮ ಎಂದು ಪೋಸ್ಟ್ ಮಾಡಿರುವ ಹೃದಯ ವಿದ್ರಾವಕ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಮೃತ ತಾಯಿಯನ್ನು ಜ್ಯೋತಿಬೆನ್ ಗೋಸಾಯಿ(48) ಎಂದು ಗುರುತಿಸಲಾಗಿದ್ದು, ಆರೋಪಿ ಮಗನನ್ನು ನಿಲೇಶ್ ಗೋಸಾಯಿ ಎಂದು ಗುರುತಿಸಲಾಗಿದೆ.
ಗುಜರಾತ್ ನಲ್ಲಿ ಮಗ ತನ್ನ ತಾಯಿಯ ಕತ್ತು ಹಿಸುಕಿ ಕೊಂದಿದ್ದು, ಇದಾದ ಬಳಿಕ ಆರೋಪಿ ಮಗ ತನ್ನ ಇನ್ ಸ್ಟಾಗ್ರಾಂನಲ್ಲಿ ತನ್ನ ತಾಯಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. "ಕ್ಷಮಿಸಿ ಬಿಡು ಅಮ್ಮ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಂಡಿದ್ದೇನೆ, ಓಂ ಶಾಂತಿ" ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾನೆ. ಇದೀಗ ಆರೋಪಿ ಮಗ ರಾಜ್ಕೋಟ್ ನಗರದ ವಿಶ್ವವಿದ್ಯಾಲಯ ಪೊಲೀಸರ ವಶದಲ್ಲಿದ್ದಾನೆ.
ಕೊಲೆ ನಡೆದ ಬಳಿಕ ಭರತ್ ಎಂಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ಪೊಲೀಸರು ಜ್ಯೋತಿಬೆನ್ ಗೋಸಾಯಿ ಅವರ ಶವವನ್ನು ಮನೆಯಿಂದ ಹೊರತೆಗೆದಿದ್ದಾರೆ. ಬಳಿಕ ಆರೋಪಿ ಮಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಆತ ತಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ವಿಚಾರಣೆ ವೇಳೆ ನೀಲೇಶ್ ಮೊದಲು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದು, ತಾಯಿ ಆ ಚಾಕು ಕಿತ್ತುಕೊಂಡಿದ್ದರಿಂದ ರಕ್ತಸ್ರಾವ ಉಂಟಾಗಿದೆ.ದ ಬಳಿಕ ತಾಯಿಯ ಬಾಯಿ ಹಾಗೂ ಗಂಟಲನ್ನು ಕಂಬಳಿಯಿಂದ ಒತ್ತಿ ಹತ್ಯೆ ಮಾಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಕೊಲೆ ಮಾಡಿದ ಆರೋಪಿ ಮಗ ತನ್ನ ಸ್ನೇಹಿತ ಭರತ್ ಗೆ ಮಾಹಿತಿ ನೀಡಿದ್ದು, ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ತನಿಖೆ ವೇಳೆ ಮೃತ ತಾಯಿ ಜ್ಯೋತಿಬೆನ್ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದು, ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ನಡೆದ ದಿನವೂ ಇದೇ ರೀತಿ ನಡೆದಿದ್ದು, ಆರೋಪಿ ನೀಲೇಶ್ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಮೃತ ಜ್ಯೋತಿಬೆನ್ ಮತ್ತು ಆರೋಪಿಯ ತಂದೆ ತಂದೆ ಸುಮಾರು 20 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಹೀಗಾಗಿ ಕೊಲೆಯಾದ ನಂತರ ಆಕೆಯ ಮಗ ಜೈಲು ಸೇರಿದರೆ ಆಕೆಯ ಮಾಜಿ ಪತಿ ಮತ್ತು ಅವರ ಇತರ ಮಕ್ಕಳು ಆ ಮೃತದೇಹವನ್ನ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಪೊಲೀಸರೇ ಆ ಮಹಿಳೆಯ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಮದು ತಿಳಿದುಬಂದಿದೆ.