ನೋಯ್ಡಾ, ಆ.31(DaijiworldNews/AA): ನಿರಂತರ ತರಬೇತಿ ಪಡೆದರೂ ನೀಟ್ ಯುಜಿ ಪರೀಕ್ಷೆ ಭೇದಿಸುವುದು ಕಷ್ಟಸಾಧ್ಯ. ಈ ನಡುವೆ 18 ವರ್ಷದ ಸನ್ನಿ ಕುಮಾರ್ ಎಂಬ ಯುವಕ ಸಮೋಸ ಮಾರಾಟ ಮಾಡುತ್ತಾ ನೀಟ್ ಯುಜಿ ಪರೀಕ್ಷೆಯಲ್ಲಿ 720 ಅಂಕಗಳಿಗೆ 664 ಅಂಕ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ನೋಯ್ಡಾದ ಸನ್ನಿ ಕುಮಾರ್ ಸಮೋಸಾ ಅಂಗಡಿ ನಡೆಸಿ ಜೀವನ ಮಾಡುತ್ತಾರೆ. ದಿನನಿತ್ಯ ಸಂಜೆ 4ರಿಂದ 5 ಗಂಟೆ ಅಂಗಡಿ ನಡೆಸುತ್ತಾರೆ. ಈ ನಡುವೆ ನೀಟ್ ಯುಜಿ ಪರೀಕ್ಷೆಗೆ ಆನ್ಲೈನ್ ವೇದಿಕೆ ಮೂಲಕ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾರೆ.
ವೈದ್ಯನಾಗುವ ಆಸಕ್ತಿ ಬಗ್ಗೆ ಮಾತನಾಡಿದ ಅವರು, ಔಷಧಗಳನ್ನು ನೋಡಿ ಕುತೂಹಲ ಹೆಚ್ಚಾಗಿತ್ತು. ಇಷ್ಟು ಚಿಕ್ಕ ಔಷಧ ಅಷ್ಟು ದೊಡ್ಡ ದೊಡ್ಡ ಕಾಯಿಲೆಗಳನ್ನು ಹೇಗೆ ಗುಣಪಡಿಸುತ್ತದೆ ಎಂದು ಕುತೂಹಲ ಮೂಡಿತು ಎಂದು ತಿಳಿಸಿದ್ದಾರೆ.
ಇನ್ನು 11ನೇ ತರಗತಿಯಿಂದಲೂ 'ಫಿಸಿಕ್ಸ್ ವಾಲಾ' ಆನ್ಲೈನ್ ತರಬೇತಿ ವೇದಿಕೆಯಿಂದ ಕಲಿತು ನೀಟ್ ಪರೀಕ್ಷೆ ಬರೆದಿದ್ದಾರೆ. ಫಿಸಿಕ್ಸ್ ವಾಲಾದ ಮುಖ್ಯಸ್ಥ ಅಲಖ್ ಪಾಂಡೆ ಸನ್ನಿ ಅವರ ಸ್ಪೂರ್ತಿದಾಯಕ ಗಾಥೆಯ ವೀಡಿಯೋ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.