ನವದೆಹಲಿ, ಆ.30(DaijiworldNews/TA):ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಚಂಡಮಾರುತ ಸೃಷ್ಟಿಯಾಗಿದೆ. ಇದಕ್ಕೆ ಅಸ್ನಾ ಚಂಡಮಾರುತ ಎಂಬುವುದಾಗಿ ಕರೆಯಲಾಗಿದೆ.
ಇನ್ನೊಂದೆಡೆ ಬಂಗಾಳ ಕೊಲ್ಲಿಯಲ್ಲೂ ವಾಯುಭಾರ ಕುಸಿತ ಉಂಟಾಗಿದೆ. ಈ ಹಿನ್ನೆಲೆ ವಾರಾಂತ್ಯದಲ್ಲಿ ಮಳೆ ತೀವ್ರವಾಗಲಿದೆ. ಅರಬ್ಬಿ ಸಮುದ್ರ ತೀರ ಹೊಂದಿರುವ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಚಂಡಮಾರುತದ ಹೊಡೆತ ತಟ್ಟಲಿದೆ. ಕೇರಳ ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿ ಎದುರಾಗಿರುವ ಚಂಡಮಾರುತ, ಎರಡೂ ಕೂಡಾ ಕರ್ನಾಟಕವನ್ನು ಕಾಡಲಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿಯಲ್ಲಿ ಆಗಸ್ಟ್ 31 ರಂದು ಭಾರಿ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಸನದಲ್ಲಿ, ಆಗಸ್ಟ್ 30 ರಿಂದ 31ರವರೆಗೆ, ರಾಯಚೂರು, ಯಾದಗಿರಿಯಲ್ಲಿ ಸೆಪ್ಟೆಂಬರ್ 1 ರಂದು ಆರೆಂಜ್ ಅಲರ್ಟ್ ಇರಲಿದೆ ಎಂದು ವರದಿಯಾಗಿದೆ.