ಬೆಂಗಳೂರು, ಆ.29(DaijiworldNews/AK): ಸಿದ್ದರಾಮಯ್ಯನವರು ಮುಡಾದ 14 ಸೈಟ್ ಪಡೆಯಬಾರದಿತ್ತು ಆದರೂ ಪಡೆದಿದ್ದಾರೆ. ಸೈಟಿಗಿಂತ ಸಂವಿಧಾನ ದೊಡ್ಡದು. ಸಿದ್ದರಾಮಯ್ಯನವರು ಟೆಕ್ನಿಕಲ್ ಕಮಿಟಿ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.
2020ರಲ್ಲಿ ವಿಷಯ ಸಂಖ್ಯೆ 5ರಲ್ಲಿ ಶೇ 50: 50 ಅನುಪಾತದಲ್ಲಿ ನಿವೇಶನ ಕೊಡುವ ಬಗ್ಗೆ ಮತ್ತೆ ಮೂಡದಲ್ಲಿ ವಿಷಯವನ್ನು ಮಂಡಿಸಲಾಗಿತ್ತು. ವಿಸ್ತಂತ ಚರ್ಚೆ ನಡೆದರೂ ಅದರ ಪರ ನಿರ್ಣಯ ಕೈಗೊಂಡಿಲ್ಲ. ಆ ಸಭೆಯಲ್ಲಿ ಚಯರ್ಮನ್ ರಾಜೀವ್, ಮರಿತಿಬ್ಬೇಗೌಡ, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಯತೀಂದ್ರ, ಆಯುಕ್ತ ನಟೇಶ್ ಮೊದಲಾದವರು ಇದ್ದರು ಎಂದು ಗಮನ ಸೆಳೆದರು. ನಡೆದ ಚರ್ಚೆಯ ಕುರಿತು ಆಡಿಯೋವನ್ನು ಮುಂದಿಟ್ಟರು. ನಿರ್ಣಯ ಆಗಿದೆ ಎಂದು ರಾಜೀವ್ ಮತ್ತು ಆಯುಕ್ತರು ಹೇಳಿದ್ದರಿಂದ 14 ಸೈಟ್ ಕೊಡಲಾಗಿತ್ತು ಎಂದು ಆಕ್ಷೇಪಿಸಿದರು.
20-11-2020ರ ನಿರ್ಣಯದ ಆಧಾರದಲ್ಲೇ ಈ ನಿವೇಶನಗಳನ್ನು ಕೊಡಲಾಗಿದೆ. 14 ನಿವೇಶನ ನೀಡುವಿಕೆ ಅಕ್ರಮ ಎಂದು ಬಿಜೆಪಿ ತಿಳಿಸಿದಾಗ ಸಿದ್ದರಾಮಯ್ಯನವರು ನಿವೇಶನಗಳನ್ನು ವಾಪಸ್ ಪಡೆಯಲು ತಿಳಿಸಿದ್ದಾರೆ. ಮಾರುಕಟ್ಟೆ ದರ 62 ಕೋಟಿ ಕೊಡಿ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ. ಅವತ್ತು 14 ಸೈಟ್ಗಳನ್ನು ಯಾರು ಅಕ್ರಮವಾಗಿ ಹಂಚಿದರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
ಸಿಎಂಗೆ ಒಂದು ಕಾನೂನು, ಜನರಿಗೆ ಇನ್ನೊಂದು ಕಾನೂನಿದೆಯೇ? ವರದಿಯಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸಿನವರಿಂದ ಅಥವಾ ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.