ಹಾಸನ,ಆ.29(DaijiworldNews/AK): ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. 10 ದಿನಗಳಲ್ಲಿ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈಗ 550 ಕ್ಯುಸೆಕ್ ನೀರು ಹರಿಯುತ್ತಿದೆ. ಇದರ ಆರು ಪಟ್ಟು ನೀರು ಉದ್ಘಾಟನೆ ದಿನ ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಬಹಳ ಜನ ಭೂಮಿ ಕೊಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ಜನರಿಗೆ ಅರ್ಪಣೆ ಮಾಡುತ್ತೇವೆ. ಈಗ ಯೋಜನೆ ಪೂರ್ಣಗೊಳ್ಳಲು ಸ್ವಲ್ಪ ತೊಡಕಿದೆ ಹಾಗಾಗಿ ವಾಣಿವಿಲಾಸ ಸಾಗರ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ನೀರು ಹರಿಸುತ್ತಿದ್ದೇವೆ ಎಂದರು.
ಈ ಯೋಜನೆಯಿಂದ ಏಳು ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಸ್ವಲ್ಪ ರಾಮನಗರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜನರು ಪಕ್ಷಾತೀತವಾಗಿ ಸಹಕಾರ ಕೊಟ್ಟಿದ್ದು, ಅವರೆಲ್ಲರನ್ನೂ ಆಹ್ವಾನಿಸುತ್ತೇವೆ ಎಂದಿದ್ದಾರೆ.