ಬೆಂಗಳೂರು, ಆ.27(DaijiworldNews/AA): ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ಮಾಡಲಾಗಿದ್ದು, ಮಹಿಳೆ ಎಂಬುದನ್ನು ಪರಿಗಣಿಸಿ ಪವಿತ್ರಾ ಗೌಡ ಅವರಿಗೆ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದ್ದಾರೆ.
ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಇಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗಿದೆ. ಈ ವೇಳೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲರು, ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ ಎಂದಿದ್ದಾರೆ.
ಸಂಪೂರ್ಣ ಪ್ರಕರನವನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುದು ನಂತರ ತಿಳಿಯಬೇಕಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಜಾಮೀನು ಅರ್ಜಿಯ ವಿಚಾರಣೆಯು ಬುಧವಾರಕ್ಕೆ ಮುಂದೂಡಿಕೆ ಆಗಿದೆ. ನಾಳೆ ಮಧ್ಯಾಹ್ನ 2.45ಕ್ಕೆ ವಿಚಾರಣೆ ನಡೆಸಲಾಗುತ್ತದೆ.