ಬೆಂಗಳೂರು, ಆ.27(DaijiworldNews/AA): ಕಾರಾಗೃಹದಲ್ಲಿ ದರ್ಶನ್ಗೆ ಯಾರೆಲ್ಲ ಸಹಕಾರ ಕೊಟ್ಟಿದ್ದಾರೋ ಅವರನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ತನಿಖೆಗಾಗಿ ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ವಿಚಾರವನ್ನು ಸರ್ಕಾರ ತೀರ್ಮಾನ ಮಾಡುವುದಿಲ್ಲ. ಬಂದೀಖಾನೆ ಪ್ರಾಧಿಕಾರವು ಕೋರ್ಟ್ ನ ಆದೇಶದ ಮೇರೆಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದೆ. ವಿಚಾರಣಾದೀನ ಕೈದಿಯಾಗಿರುವುದರಿಂದ ಕೆಲವು ನಿಯಮಗಳ ಪ್ರಕಾರವೇ ಸ್ಥಳಾಂತರ ಮಾಡಬೇಕಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರ ಆಗಬಹುದು ಎಂದು ಹೇಳಿದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಬದಲಾವಣೆ ಮಾಡಬಹುದು. ಆದರೆ, ಮೂರು ಭಾಗ ಮಾಡಲು ಸಾಧ್ಯವಿಲ್ಲ. ಬ್ಲಾಕ್ 1, ಬ್ಲಾಕ್ 2 ಬ್ಲಾಕ್ 3 ಇವೆ. ಅದರೊಂದಿಗೆ ಬೇರೆ ಬ್ಯಾರಕ್ಗಳಿವೆ. ಇದರಲ್ಲಿ ಕೈದಿಗಳನ್ನು ಇರಿಸಲು ಮಾರ್ಪಾಡು ತರಬಹುದು, ಭಾಗ ಮಾಡುವುದಿಲ್ಲ ಎಂದರು.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬುವನಿಗೆ ಒಂದು ಬ್ಯಾರಕ್ನಿಂದ ಮತ್ತೊಂದು ಬ್ಯಾರಕ್ಗೆ ತೆರಳಲು ಅವಕಾಶ ಕೊಟ್ಟಿದ್ದಾರೆ ಎಂಬುದು ಸೋಮವಾರ ಭೇಟಿ ಮಾಡಿದಾಗ ಗೊತ್ತಾಗಿದೆ. ಈ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಈ ಸ್ಥಳಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.