ಬೆಂಗಳೂರು, ಆ.27(DaijiworldNews/AA): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು. ಈ ಸಂಬಂಧ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ. ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಒಂದು ಮನೆಗೆ ಸೀಮಿತವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಧಾಕೃಷ್ಣ ಎಂಬುವರ ಹೆಸರಿನಲ್ಲಿ ಟ್ರಸ್ಟ್ ಇದೆ. ಕಲಬುರಗಿಯಲ್ಲಿ ಟ್ರಸ್ಟ್ ರಿಜಿಸ್ಟರ್ ಮಾಡಲಾಗಿದೆ. ದಲಿತರು ಅಂದರೆ ಒಂದೇ ಒಂದು ಕುಟುಂಬವಲ್ಲ. ಅನೇಕ ದಲಿತ ಕುಟುಂಬ ಕೂಡ ಇವೆ ಎಂದರು.
ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ನೀಡಿದ್ದಾರೆ. ಅದು ಕೂಡ ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಇತರೆ ಟ್ರಸ್ಟ್ ಗೂ ಅರ್ಧ ಎಕರೆ ಸಿಕ್ಕಿದ್ದರೂ ಅನುಕೂಲ ಆಗುತ್ತಿತ್ತು. ಇದು ನಂಬಿಕೆಯ ಪ್ರಶ್ನೆ. ಇದು ಮತ್ತೊಂದು ಮುಡಾ ಕೇಸ್ ಆಗಲಿದೆ. ಆ ಜಾಗ ಬೇಕು ಅಂತ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬ ಒಂದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬವಲ್ಲ. ಈ ಬಗ್ಗೆ ಸಂಪೂರ್ಣ ದಾಖಲೆ ಇಟ್ಟು ಮಾತನಾಡುತ್ತೇನೆ. ನಾನು ಹಿಟ್ ಆಂಡ್ ರನ್ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.