ಬೆಂಗಳೂರು, ಆ.23(DaijiworldNews/AK): ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದ ಹಣಕಾಸು ಅವ್ಯವಹಾರ ಮತ್ತು ಸಂಚಿತ ನಿಧಿಯ ದುರುಪಯೋಗ ಹಾಗೂ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ ಅವರಿಂದ ಸಂವಿಧಾನದ ಬಾಧ್ಯತೆಯ ಉಲ್ಲಂಘನೆ ಮತ್ತು ಅಸಾಂವಿಧಾನಿಕ ಹಣಕಾಸು ವ್ಯವಹಾರಕ್ಕಾಗಿ ಅವರನ್ನು ವಜಾಗೊಳಿಸುವ ಕುರಿತು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಸಿಎಂ ವಿರುದ್ಧ ದೂರಿನ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯ ಹಣಕಾಸು ಸಚಿವರು. ಜೆಡ್ಪಿ-ಟಿಪಿ (ಜಿಲ್ಲಾ ಪಂಚಾಯತಿ -ತಾಲ್ಲೂಕು ಪಂಚಾಯತಿ) ಬಳಕೆ ಆಗದ ಹಣ ಎಷ್ಟು ಇದೆ ಎಂದು ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಬಳಿ ಕೇಳಲಾಗಿತ್ತು. ಆಗ ಅವರು 1,953 ಕೋಟಿ ರೂ. ಬಳಕೆ ಆಗದ ಹಣ ಇದೆ ಉತ್ತರಿಸಿದ್ದರು.
ಅದರಲ್ಲಿ 1,494 ಕೋಟಿ ರೂ. ಖಜಾನೆಗೂ ಜಮಾ ಆಗಿಲ್ಲ ಎಂದು ಪ್ರಶ್ನಿಸಿದಾಗ ನಿಯಮಿತವಾಗಿ ಪೇಮೆಂಟ್ ಜಮೆ ಆಗ್ತಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದರು.ಖರ್ಚಾಗದೇ ಇದ್ದ ಹಣ ಸಂಚಿತ ನಿಧಿ ಮೂಲಕ ಸರ್ಕಾರಕ್ಕೆ ಬರಬೇಕು. ಅಲ್ಲದೆ ಆ ಹಣ ಬಳಕೆ ಆಗುವಾಗ ಶಾಸಕರ ಅನುಮತಿ ಪಡೆಯಬೇಕು. ನಾನು ಹಣಕಾಸು ಇಲಾಖೆಗೂ ಪತ್ರ ಬರೆದಿದ್ದೆ, ಅಲ್ಲೂ ಹಣ ಜಮಾ ಆಗಿಲ್ಲ, ಆ ಹಣ ಎಲ್ಲಿಗೆ ಹೋಯ್ತ ಎಂದು ಪ್ರಶ್ನಿಸಿದ್ದಾರೆ.
ಜೆಡ್ಪಿ-ಟಿಪಿಯಲ್ಲಿ ಹಿಂದುಳಿದ ವರ್ಗದವರೆ ಜಾಸ್ತಿ ಇದ್ದಾರೆ. ಈ ಹಣದ ಬಳಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ಇದಕ್ಕೆಲ್ಲಾ ಹಣಕಾಸು ಸಚಿವರೇ ಹೊಣೆ ಎಂದರು. ಅದಕ್ಕಾಗಿಯೇ ನಾನು ಸಿದ್ದರಾಮಯ್ಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಸಾರ್ವಜನಿಕ ಖಾತೆ ಸಮಿತಿಗೂ ದೂರು ನೀಡಿದ್ದೇನೆ ಎಂದು ಹೇಳಿದರು.