ಬೆಂಗಳೂರು, ಆ.23(DaijiworldNews/AK): ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಮಾತುಕತೆ ಮಾಡಲು ಕಾಂಗ್ರೆಸ್ ಪ್ರಮುಖರು ದೆಹಲಿಗೆ ಹೋದ ಹಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಸಂಶಯ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹತ್ತಾರು ಸಮಸ್ಯೆಗಳು ಕರ್ನಾಟಕದಲ್ಲಿ ಕಿತ್ತು ತಿನ್ನುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್ ಅವರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
ಇವರು ಮಾನ್ಯ ರಾಜ್ಯಪಾಲರನ್ನು ವರ್ಗಾವಣೆ ಮಾಡಿಸಲು ಹೋಗಿಲ್ಲ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಕ್ಕೆ ಹೋರಾಟ ಮಾಡಲು ಹೋಗಿಲ್ಲ. ಹೇಗಿದ್ದರೂ ಈ ಸರಕಾರ ಭ್ರಷ್ಟಾಚಾರದಲ್ಲಿ ಸಿಲುಕಿದೆ; ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಟ್ಟ ಕಾರಣ ರಾಜೀನಾಮೆ ಅನಿವಾರ್ಯ ಆಗಲಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಮಾತುಕತೆ ಮಾಡಿಕೊಂಡು ಬರಲು ಹೋಗಿದ್ದಾರೆ ಎಂಬ ದೊಡ್ಡ ಗುಮಾನಿ ನನಗಿದೆ ಎಂದು ತಿಳಿಸಿದರು.
ಪ್ರತಿದಿನ ಬಹಿರಂಗ ಆಗುತ್ತಿರುವ ಮೂಡ ನಿವೇಶನ ಹಗರಣದ ವಿವರದಿಂದ ಮಾನ್ಯ ಸಿದ್ದರಾಮಯ್ಯನವರು ಆತಂಕಗೊಂಡಿದ್ದಾರೆ. ಒಮ್ಮೆ ನಾನು ಯಾರಿಗೂ ಪತ್ರ ಬರೆದಿಲ್ಲ; ನನ್ನ ಪತ್ನಿಯೂ ಪತ್ರ ಬರೆದಿಲ್ಲ ಎಂದು ಹೇಳಿದ್ದರು. ಅವರ ಪತ್ನಿ ಪಾರ್ವತಿಯವರು ಬರೆದ ಪತ್ರ ಬಿಡುಗಡೆಯಾದ ತಕ್ಷಣ, ನನಗೆ ಗೊತ್ತಿಲ್ಲ ಎಂದಿದ್ದರು. ಮಾನ್ಯ ಮುಖ್ಯಮಂತ್ರಿಗಳು ತಾನೇನು ಮಾಡುತ್ತಿದ್ದೇನೆ? ತನ್ನ ಕಚೇರಿ ಏನು ಮಾಡುತ್ತಿದೆ? ತನ್ನ ಪತ್ರ, ಪತ್ನಿಯವರ ಪತ್ರ, ತನ್ನದೇ ಆದ 14 ನಿವೇಶನಗಳ ಬಗ್ಗೆ ವಿವರ ಗೊತ್ತಿಲ್ಲವೆಂದಾದರೆ ಇನ್ನು ಸರಕಾರದ ಬಗ್ಗೆ ಗೊತ್ತಿದೆಯೇ ಇವರಿಗೆ? ಅರಳುಮರುಳು ಎಂಬಂತೆ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ ಎಂದು ಆರೋಪಿಸಿದರು.