ನವದೆಹಲಿ, ಆ.23(DaijiworldNews/AK): ಮಾರುಕಟ್ಟೆ ನಿಯಂತ್ರಕ ಸೆಬಿಯು ವಂಚನೆ ಎಸಗಿದ ಹಿನ್ನಲೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರನ್ನು ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ 5 ವರ್ಷ ನಿಷೇಧಿಸಿ 25 ಕೋಟಿ ರೂ. ದಂಡ ವಿಧಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ನ ಕಂಪನಿಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕೆ ಕಂಪನಿಯ ಪ್ರಮುಖ ಅಧಿಕಾರಿಗಳು ಸೇರಿದಂತೆ ಅನಿಲ್ ಅಂಬಾನಿಗೆ ಸೇರಿದ 24 ಘಟಕಗಳ ಮೇಲೆ ಸೆಬಿ 5 ವರ್ಷ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲದೇ ಆರ್ಐಹೆಚ್ಎಲ್ ಸಂಸ್ಥೆಯನ್ನು ಸೆಕ್ಯೂರೀಟೀಸ್ ಮಾರುಕಟ್ಟೆಯಿಂದ 6 ತಿಂಗಳು ನಿರ್ಬಂಧಿಸಿ 6 ಲಕ್ಷ ರೂ. ದಂಡವನ್ನು ವಿಧಿಸಿದೆ.
ಪಟ್ಟಿಮಾಡಿದ ಯಾವುದೇ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಅಥವಾ ರಿಲಯನ್ಸ್ನಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯೂರಿಟೀಸ್ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದದಂತೆ ಸೆಬಿ ಅನಿಲ್ ಅಂಬಾನಿಗೆ ಸೂಚಿಸಿದೆ.
ಆರ್ಎಚ್ಎಫ್ಎಲ್ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ನೆರವಿನಿಂದ ಅನಿಲ್ ಅಂಬಾನಿ ಅವರು ಕಂಪನಿಯ ಹಣವನ್ನು ತನ್ನ ಸಂಸ್ಥೆಗಳ ಸಾಲವನ್ನು ಮರೆಮಾಚುವ ಉದ್ದೇಶದಿಂದ ವಂಚನೆಯ ಯೋಜನೆಯನ್ನು ರೂಪಿಸಿದ್ದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಸೆಬಿ ಸೂಕ್ತ ಕ್ರಮಕೈಗೊಂಡಿದೆ.