ಉಡುಪಿ, ಮೇ 23 (Daijiworld News/MSP): ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಗೇಲಿ ಮಾಡಿದ್ದರು, ಆದರೆ ಇದೀಗ ಮೋದಿ ಸುನಾಮಿ ಕರ್ನಾಟಕದ ವಿಪಕ್ಷವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ರಾಜ್ಯ ಸರಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಗೆಲುವಿನ ಅಲೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಹೇಳಿದ್ದಾರೆ.
ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಜಯಭೇರಿ ಬಾರಿಸುತ್ತಿದ್ದು, ದೇಶದ ಮಹಾ ಘಟಬಂಧನ್ ಛಿದ್ರವಾಗಿದೆ. ಜನ ಮೋದಿ ನೇತೃತ್ವಕ್ಕೆ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಜನ ಸಮ್ಮಿಶ್ರ ಸರಕಾರದ ಜೊತ ಇಲ್ಲ ಎಂಬುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು . ರಾಜ್ಯದಲ್ಲಿ ಕುಮಾರಸ್ವಾಮಿ ಸರಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಮೈತ್ರಿಕೋಟದ ಅಭ್ಯರ್ಥಿಗಳಾದ ದೇವೇಗೌಡ, ಖರ್ಗೆ, ಮುನಿಯಪ್ಪ, ಮೊಯ್ಲಿ ಮುಂತಾದವರಿಗೆ ಸೋಲಾಗಿದೆ. ಹೀಗಾಗಿ ರಾಜ್ಯ ಸರಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಅಪವಿತ್ರ ಮೈತ್ರಿಗೆ ಎರಡು ಪಕ್ಷ ನಾಶವಾಗಿದೆ ಎಂದರು.
ಇನ್ನು ಕಾಂಗ್ರೆಸ್ ಜೆಡಿಎಸ್ ಶಾಸಕರು ಬರೋ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಅವರ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದರೆ ಬಿಜೆಪಿ ಸ್ವಾಗತಿಸುತ್ತದೆ ಎಂದರು.