ಬೆಳ್ತಂಗಡಿ, ಮೇ22(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ನೀರಿನ ಅಭಾವ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೂ ಬಿಸಿ ಮುಟ್ಟಿಸಿದೆ.
ಕೆಲ ದಿನಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಕೆಲವು ದಿನಗಳ ಮಟ್ಟಿಗೆ ತಮ್ಮ ಯಾತ್ರೆಯನ್ನು ಮುಂದೂಡುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹಗ್ಗಡೆ ಅವರು ಮನವಿ ಮಾಡಿದ್ದರು.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಭಕ್ತರಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ನೀರಿನ ಅಭಾವ ಉಂಟಾಗಿದೆ, ಇನ್ನೂ ದೇವಸ್ಥಾನದ ವಸತಿ ಗೃಹಗಳಿಗೂ ಹೆಚ್ಚಿನ ನೀರು ಖರ್ಚಾಗುತ್ತದೆ. ಈಗ ನೀರಿನ ಅಭಾವ ಇರುವುದರಿಂದ ಧರ್ಮಸ್ಥಳ ಯಾತ್ರಿಕರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಡಾ. ಹೆಗ್ಗಡೆಯವರು ಸಾರ್ವಜನಿಕರಲ್ಲಿ ವಿನಂತಿಸಿದ್ದರು.
ಇದೀಗ ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಕಂಡುಬಂದಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಧರ್ಮಸ್ಥಳದಲ್ಲಿ ನೀರಿನ ಅಭಾವ ಇರುವುದರಿಂದ ಭಕ್ತರು ಪ್ರವಾಸವನ್ನು ಮುಂದೂಡುವುದು ಉತ್ತಮ ಎಂಬ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾಡಿದ ಮನವಿಗೆ ಭಕ್ತರು ಸ್ಪಂದಿಸಿದ್ದಾರೆ.
ಹೆಚ್ಚಿನ ಪ್ರವಾಸಿಗರು ಕ್ಷೇತ್ರದ ಕಚೇರಿಗೆ ದೂರವಾಣಿ ಕರೆ ಮಾಡಿ ನೀರಿನ ಅಭಾವದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.