ಪುತ್ತೂರು, ಮೇ 22 (Daijiworld News/SM): ದಲಿತ ಸಮುದಾಯವನ್ನು ನಿಂದಿಸಿ ಅವಮಾನಿಸಿ ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಮತ್ತು ಜೀವ ಬೆದರಿಕೆಯೊಡ್ಡಿರುವ ವ್ಯಕ್ತಿಯನ್ನು ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಸಂದೇಶ್ ಕುಮಾರ್(47) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಫೇಸ್ ಬುಕ್ ನಲ್ಲಿ ದಲಿತ ಸಮುದಾಯವನ್ನು ಅವಮಾನಿಸಿ ನಿಂದನಾತ್ಮಕವಾಗಿ ಬರಹವನ್ನು ಪ್ರಕಟಿಸಿದ್ದ. ಅಲ್ಲದೆ ಜೀವ ಬೆದರಿಕೆ ಕೂಡ ಒಡ್ಡಿದ್ದ ಎಂದು ಪುತ್ತೂರು ಠಾಣೆಗೆ ದೂರಲಾಗಿತ್ತು. ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಅನಂದ ಬೆಳ್ಳಾರೆ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ಕೂಡ ನಡೆಸಿದ್ದರು.
ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ವ್ಯಕ್ತಿಯಾದ ಸಂದೇಶ್ ಕುಮಾರ್ ಶೆಟ್ಟಿ ಎಂಬವರು ಫೇಸ್ ಬುಕ್ ನಲ್ಲಿ ದಲಿತ ಸಮುದಾಯವನ್ನು ಅವಮಾನಿಸಿದ್ದು ಹಾಗೂ ನಿಂದಿಸಿದ್ದು, ಇವರ ಮೇಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಬಂಧನ ನಡೆಯುವವರೆಗೂ ಪುತ್ತೂರು ಗ್ರಾಮಂತರ ಪೋಲಿಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಇಲಾಖೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.