ಕಾಸರಗೋಡು, ಮೇ 22 (Daijiworld News/SM): ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ನಡೆಯಲಿದೆ. ಒಟ್ಟು ೧೫ ಸುತ್ತು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಹೊರ ಬೀಳುವ ನಿರೀಕ್ಷೆಗಳಿವೆ.
ಬೆಳಿಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು, ಮೊದಲು ಅಂಚೆ ಮತಗಳು ಮತ್ತು ಆಯ್ದ ವಿವಿ ಪ್ಯಾಟ್ ಸ್ಲಿಪ್ ಗಳ ಎಣಿಕೆ ನಡೆಯಲಿದೆ. ಬಳಿಕ ಮತಯಂತ್ರಗಳ ಎಣಿಕಾ ಕಾರ್ಯ ನಡೆಯಲಿದೆ.
ಒಂದು ಸುತ್ತಿನಲ್ಲಿ 89 ಮತಗಟ್ಟೆಗಳ ಎಣಿಕೆ ಮಾಡಲಾಗುವುದು. ಒಟ್ಟು 15 ಸುತ್ತು ಮತ ಎಣಿಕೆ ನಡೆಯಲಿದೆ. ವಿವಿ ಪ್ಯಾಟ್ ಸ್ಲಿಪ್ ಗಳನ್ನು ಎಣಿಕೆ ಮಾಡಲಿರುವುದರಿಂದ ಮಧ್ಯಾಹ್ನದ ವೇಳೆಗಷ್ಟೇ ಅಧಿಕೃತ ಫಲಿತಾಂಶ ಹೊರಬೀಳಲಿದೆ.
ಏಪ್ರಿಲ್ 23ರಂದು ನಡೆದ ಚುನಾವಣೆಯಲ್ಲಿ ೮೦. ೫೭ ಶೇಕಡಾ ಮತದಾನವಾಗಿತ್ತು. ನಕಲಿ ಮತದಾನ ನಡೆದ ಹಿನ್ನಲೆಯಲ್ಲಿ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನ ನಡೆದಿತ್ತು. ಮಂಜೇಶ್ವರ, ಕಾಸರಗೋಡು, ಕಾಞಂಗಾಡ್ ವಿಧಾನಸಭಾ ಕ್ಷೇತ್ರಗಳ ತಲಾ 14 ಮೇಜುಗಳು, ಉದುಮಾಕ್ಕೆ 10, ತ್ರಿಕರಿಪುರಕ್ಕೆ 13, ಪಯ್ಯನ್ನೂರು,ಕಲ್ಯಾಶೇರಿಗೆಗಳಿಗೆ ತಲಾ 12 ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ.
ಅಂಚೆ ಮತಗಳ ಗಣನೆ ಜಿಲ್ಲಾಧಿಕಾರಿ ಅವರ ಮೇಲ್ನೋಟದಲ್ಲಿ ನಡೆಯಲಿದೆ. ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿಯ ಶ್ರೇಣಿಯಲ್ಲಿರುವ 6 ಎ.ಆರ್.ಒ.ಗಳನ್ನು ನೇಮಿಸಲಾಗಿದೆ. ಇಲೆಕ್ಟ್ರಾನಿಕಲಿ ಟ್ರಾನ್ಸ್ ಮಿಟೆಡ್ ಪೋಸ್ಟಲ್ ವೋಟ್ ಗಳು, ಸ್ಕ್ಯಾನ್ ನಡೆಸಿ ಮತ ಎಣಿಕೆ ನಡೆಸಲು 12 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 16 ತಂತ್ರಜ್ಞರು ಇರಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದ 5 ಮತಗಟ್ಟೆಗಳನ್ನು ಆಯ್ದು, ಈ ಬೂತ್ ಗಳ ವಿವಿಪ್ಯಾಟ್ ಸ್ಲಿಪ್ ಗಳನ್ನು ಗಣನೆ ಮಾಡಿ, ಮತಯಂತ್ರದ ಫಲಿತಾಂಶವನ್ನು ಹೋಲಿಸಿ ನೋಡಲಾಗುತ್ತದೆ.
ಇನ್ನು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಯುಡಿಎಫ್, ಎಲ್ ಡಿಎಫ್ ಹಾಗೂ ಬಿಜೆಪಿ ನಡುವೆ ಹಣಾಹಣಿ ನಡೆದಿದೆ. ಈ ಪೈಕಿ ಎಲ್ ಡಿಎಫ್ ಹಾಗೂ ಯುಡಿಎಫ್ ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿದೆ. ಇನ್ನೊಂದೆಡೆ ಶಬರಿಮಲೆ ವಿಚಾರ ಬಿಜೆಪಿಗೆ ಪ್ಲಸ್ ಎಣಿಸಿದೆ. ಆದರೆ, ಅಂತಿಮವಾಗಿ ಮತದಾರರ ಆಶೀರ್ವಾದ ಮಾತ್ರ ಯಾರಿಗೆ ಅನ್ನೋದಕ್ಕೆ ಫಲಿತಾಂಶ ಹೊರ ಬಿದ್ದ ಬಳಿಕವಷ್ಟೇ ಉತ್ತರ ಸಿಗಲಿದೆ.