ಪಡುಬಿದ್ರಿ, ಆ.14(DaijiworldNews/AA): ಕಂಚಿನಡ್ಕದಲ್ಲಿ ಉದ್ದೇಶಿತ ಟೋಲ್ ಗೇಟ್ ಸೈಟ್ ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಟೋಲ್ ವಿರೋಧಿ ಪ್ರತಿಭಟನಾ ಸಮಿತಿ ಸದಸ್ಯರು ಮಂಗಳವಾರ ಮುಖಾಮುಖಿಯಾದರು.
ಸ್ಥಳಕ್ಕೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ರಘು ಎಲ್, ಸಹಾಯಕ ಇಂಜಿನಿಯರ್ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಭೇಟಿಯ ಮಾಹಿತಿ ತಿಳಿದ ಟೋಲ್ ವಿರೋಧಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು.
ಪ್ರತಿಭಟನಾಕಾರರಿಗೆ ಅಧಿಕಾರಿಗಳು ಟೋಲ್ ಯೋಜನೆಯ ವಿವರಗಳನ್ನು ನೀಡಿದರು. ಆದರೆ, ಟೋಲ್ ಗೇಟ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾರ್ಯಕರ್ತರು ಅಧಿಕಾರಿಗಳೊಂದಿಗೆ ವಾಗ್ವಾದ ಆರಂಭಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ವಾಗ್ವಾದದ ಸಂದರ್ಭದಲ್ಲಿ, ಟೋಲ್ ಗೇಟ್ ಯೋಜನೆ ಕಂಪನಿಯ ನೌಕರರು, ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕಾರ್ಯಕರ್ತರು ಕಂಪನಿಯ ಸಿಬ್ಬಂದಿಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಂತಿಮವಾಗಿ ಸೈಟ್ ತೊರೆಯುವಂತೆ ಒತ್ತಾಯಿಸಿದರು. ಘಟನೆ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ನೌಕರರನ್ನು ತಮ್ಮ ವಾಹನದಲ್ಲಿ ಪ್ರದೇಶದಿಂದ ಹೊರಡುವಂತೆ ಸೂಚಿಸಿದರು ಮತ್ತು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ನಂತರ ಪೊಲೀಸರು ಮತ್ತೆ ಅಧಿಕಾರಿಗಳನ್ನು ಕರೆಸಿ, ಹೆಚ್ಚಿನ ಮಾಹಿತಿ ನೀಡಲು ಯತ್ನಿಸಿದರು. ಆದರೆ, ಟೋಲ್ಗೇಟ್ ಕಾಮಗಾರಿ ಮುಂದುವರಿಸಬಾರದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಟೋಲ್ ಗೇಟ್ ಪ್ರಸ್ತಾಪ ರದ್ದುಗೊಳಿಸುವಂತೆ ಒತ್ತಾಯಿಸಿ ಐದು ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಮುಖಂಡ ಸುಹಾಸ್ ಹೆಗ್ಡೆ ಘೋಷಿಸಿದ್ದಾರೆ.