ಮಲ್ಪೆ,ಆ.13(DaijiworldNews/AA): ಎರಡು ತಿಂಗಳು ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟುಗಳು ಮತ್ತೆ ಸಮುದ್ರಕ್ಕಿಳಿದಿದ್ದು, ಮಲ್ಪೆಯ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗೆಳು ಪ್ರಾರಂಭವಾಗಿದ್ದು ಜನರ ಸಂಚಾರ ಹೆಚ್ಚಳವಾಗಿದೆ.
ಆ. 1ರಿಂದ ಯಾಂತ್ರಿಕ ಮೀನು ಗಾರಿಕೆ ಆರಂಭಿಸಲು ಅವಕಾಶವಿದ್ದರೂ ತೀವ್ರ ಮಳೆಗಾಳಿಯಿಂದಾಗಿ ಯಾರೂ ಕಡಲಿಗೆ ಇಳಿದಿರಲಿಲ್ಲ. ಈಗ ಮಳೆಯು ಕಡಿಮೆಯಾಗಿದ್ದು, ನಾಗಪಂಚಮಿಯಂದು ಬಹುತೇಕ ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿದ್ದವು.
ಮಲ್ಪೆ ವ್ಯಾಪ್ತಿಯಲ್ಲಿ ಸುಮಾರು 1,700ರಷ್ಟು ಆಳಸಮುದ್ರ ಬೋಟುಗಳಿದ್ದು, ಇದೀಗ ಶೇ. 50ರಷ್ಟು ಆಳಸಮುದ್ರ ಬೋಟುಗಳು ಸಮುದ್ರಕ್ಕೆ ಇಳಿದಿವೆ. ಮೀನುಗಾರಿಕೆ ಚುರುಕಾದ ಬೆನ್ನಲ್ಲೇ ಮಲ್ಪೆಯ ಆರ್ಥಿಕ ಚಟುವಟಿಕೆಗಳೂ ಬಿರುಸಾಗುತ್ತಿವೆ. ಬಂದರಿನಲ್ಲಿ ದುಡಿಯುವ ತಮಿಳುನಾಡು, ಆಂಧ್ರಪ್ರದೇಶದ ಮೀನುಗಾರರು ಆ. 6-7ರಂದು ಮೀನುಗಾರಿಕೆಗೆ ತೆರಳಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರಿಕೆಗೆ ಹಿನ್ನೆಡೆ ಉಂಟಾಗಿದೆ. ಈ ಬಾರಿ ಪಟ್ಟೆಬಲೆ, ಡಿಸ್ಕೋ ಮೀನುಗಾರಿಕೆಗೆ ಉತ್ತಮ ಅವಕಾಶ ದೊರೆತಿರಲಿಲ್ಲ. ವಾರದಿಂದ ನಾಡದೋಣಿಗಳು ನೀರಿಗಿಳಿದಿದ್ದರೂ ಹೇಳಿಕೊಳ್ಳುವಷ್ಟು ಮೀನು ದೊರೆತಿರಲಿಲ್ಲ. ಇದೀಗ ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿರುವುದರಿಂದ ನಾಡದೋಣಿ ಮೀನುಗಾರಿಕೆಗೆ ಮುಕ್ತಾಯ ಹಾಡಬೇಕಾಗಿದೆ. ಇನ್ನು ಮಳೆಗಾಲದಲ್ಲಿ ನಾಡದೋಣಿಗೆ ಹೆಚ್ಚಿನ ಪ್ರಮಾಣದ ಮೀನು ಲಭ್ಯವಾಗದ ಹಿನ್ನೆಲೆ ಯಾಂತ್ರಿಕ ಮೀನುಗಾರಿಕೆಗೆ ಸಾಕಷ್ಟು ಮೀನು ದೊರೆಯುವ ವಿಶ್ವಾಸವಿದೆ.