ಬೈಂದೂರು, ಆ.13(DaijiworldNews/AK):ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ನೇತೃತ್ವದ ಆಹೊರಾತ್ರಿ ದಿಡೀರ್ ಧರಣಿಗೆ ಮಂಗಳವಾರ ಮಧ್ಯಾಹ್ನ ತೆರೆ ಬಿದ್ದಿದೆ. ಬೆಳಿಗ್ಗೆ 9 ಗಂಟೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಶಾಸಕರಿಗೆ ಬೆಂಬಲ ಸೂಚಿಸಿದರು.
ಬಳಿಕ ಸುಮಾರು 10 ಗಂಟೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಸ್ಪಿ ಅರುಣ್ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ತಾಲೂಕು ಕಚೇರಿಗೆ ಒಳಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ನಿಯೋಗದ ಜೊತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಸ್ಪಿ ಅರುಣ್ ಕುಮಾರ್ ಮಾತುಕತೆ ನಡೆಸಿದರು.
ಸುಮಾರು ಅರ್ಧ ಗಂಟೆಯ ದೀರ್ಘ ಮಾತುಕತೆಯ ಬಳಿಕ ಹೊರಬಂದ ಜಿಲ್ಲಾಧಿಕಾರಿಯವರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಮನವಿ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ಗುರುರಾಜ್, ಶಾಸಕರ ಹಕ್ಕು ಚ್ಯುತಿಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಜನರ ಸೇವೆ ಮಾಡಲು ಅಧಿಕಾರಿಗಳು ಸ್ಪಂದಿಸಬೇಕು. ಅಧಿಕಾರಿಗಳ ಸಭೆ ನಡೆಸಲು ಅಡ್ಡಿಪಡಿಸಬಾರದು. ಇದಕ್ಕೆ ಯಾವುದೇ ರೀತಿಯ ಆಕ್ಷೇಪಗಳಿದ್ದಲ್ಲಿ ಹಿಂಬರಹ ನೀಡಿದರೆ ಕಾನೂನು ರೀತಿ ಹೋರಾಟ ಮಾಡುತ್ತೇನೆ ಎಂದರು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ನಾನು ಶಾಸಕರ ಹಕ್ಕುಗಳಿಗೆ ತಡೆಯೊಡ್ಡಿಲ್ಲ. ಕಾನೂನಿನ ಅವಕಾಶವನ್ನು ಸ್ಪಷ್ಟಪಡಿಸಿದ್ದೇನೆ. ಖಾಸಗೀ ಸ್ಥಳಗಳಲ್ಲಿ ಅಧಿಕಾರಿಗಳ ಸಭೆ ಕರೆಯಲು ಅವಕಾಶವಿಲ್ಲ. ಶಾಸಕರ ಖಾಸಗೀ ಕಚೇರಿಗಳಲ್ಲಿ ಸಭೆ ಕರೆಯುವ ಅವಕಾಶಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ತಿಳಿಸಲಾಗುವುದು ಎಂದರು. ಜಿಲ್ಲಾಧಿಕಾರಿಗಳು ಮನವಿಯನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.