ಮಂಗಳೂರು, ಆ 13 (DaijiworldNews/MS): ಸ್ಮಾರ್ಟ್ ಸಿಟಿ ಯೋಜನೆಯಡಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ 53 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದಗೊಂಡಿರುವ ಸುಸಜ್ಜಿತ ಸರ್ಜಿಕಲ್ ಬ್ಲಾಕ್ ನ ಅಂತಿಮ ಹಂತದ ಕಾಮಗಾರಿಗಳನ್ನು ಸಂಸದ ಕ್ಯಾ. ಸಂಸದ ಕ್ಯಾ. ಬ್ರಿಜೇಶ್ ಚೌಟ ರವರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ರವರು ದೇಶವು ಸ್ವಾತಂತ್ರ್ಯಗೊಂಡು ಏಳು ದಶಕಗಳ ನಂತರ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ಕಾಣುತ್ತಿದೆ. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಕನಸಿನ ಯೋಚನೆಯಾದ ಸ್ಮಾರ್ಟ್ ಸಿಟಿ ಮೂಲಕ ನಮ್ಮ ಜಿಲ್ಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸರ್ಜಿಕಲ್ ಬ್ಲಾಕ್ ನಿರ್ಮಾಣವಾಗಿದ್ದು ಇದಕ್ಕೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲೇ ನಾನು ಶಿಲಾನ್ಯಾಸ ನೆರವೇರಿಸಿದ್ದೆ.
ನಂತರ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದರೂ ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಯಾವುದೇ ಅನುದಾನದ ನೆರವು ಸಿಗದೇ ಅಂತಿಮ ಹಂತದ ಕಾಮಗಾರಿಗಳು ನಿಂತು ಉದ್ಘಾಟನೆಗೆ ತಾಂತ್ರಿಕ ಕಾರಣಗಳ ನೆಪ ಕೇಳಿ ಬರುತ್ತಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕೊನೆಪಕ್ಷ ಸ್ಮಾರ್ಟ್ ಸಿಟಿಯಿಂದ ಹೆಚ್ಚುವರಿ ಅನುದಾನವನ್ನು ಪಡೆದುಕೊಂಡಾದರೂ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರವಾಗಿ ಉದ್ಘಾಟನೆ ನಡೆಸುವಂತೆ ಮನವಿ ಮಾಡಿದ್ದೆ. ಅದರಂತೆ ಸುಮಾರು 7 ಕೋಟಿ ರೂ ಅನುದಾನವನ್ನು ಬಳಸಿಕೊಳ್ಳುವಂತೆ ಸಚಿವರು ಸಂಬಂಧಪಟ್ಟವರಿಗೆ ಸೂಚಿಸಿದ್ದು ಇದೀಗ ಉದ್ಘಾಟನೆಯ ದಿನವೂ ಕೂಡಿ ಬಂದಿದೆ. ಅದರಲ್ಲೂ ನನ್ನ ಅವಧಿಯಲ್ಲೇ ಈ ಲೋಕಾರ್ಪಣೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ. ಮುಂದುವರೆದು ಈ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಗಳ ಸಹಿತ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದೂ ಆಗಿರುವುದರಿಂದ ಆ ನಿಟ್ಟಿನಲ್ಲಿ ಸರ್ಕಾರವು ಸಹಕಾರ ನೀಡಬೇಕು. ಈ ಅತ್ಯಾಧುನಿಕ ಸೌಲಭ್ಯ ಜಿಲ್ಲೆಯ ಜನತೆಗೆ ಮಾತ್ರವಲ್ಲದೇ ಅಕ್ಕ ಪಕ್ಕದ ಜಿಲ್ಲೆಯ ಜನತೆಗೂ ಲಭ್ಯವಾಗಲಿದ್ದು ಅವರೆಲ್ಲರ ಪರವಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಶತಕೋಟಿ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುಮಿತ್ರ, ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಲೀಲಾವತಿ, ಶೈಲೇಶ್, ಶಕಿಲಾ ಕಾವ, ಬಿಜೆಪಿ ಪ್ರಮುಖರಾದ ಮಂಜುಳಾ ರಾವ್, ವಸಂತ್ ಜೆ ಪೂಜಾರಿ, ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ನಿತಿನ್ ಕುಮಾರ್, ಸಂಜಯ್ ಪ್ರಭು, ದಿವಾಕರ ಪಾಂಡೇಶ್ವರ, ಮೋಹನ್ ಪೂಜಾರಿ, ರವಿಶಂಕರ್ ಮಿಜಾರ್, ಕಿರಣ್ ರೈ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.