ಮಂಗಳೂರು, ಆ 13 (DaijiworldNews/MS): ಲಾಲ್ಬಾಗ್ ಹ್ಯಾಟ್ ಹಿಲ್ನಲ್ಲಿರುವ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಯಲ್ಲಿ ಕೆಲ ಮಾತ್ರೆಗಳು ಲಭ್ಯವಿಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
'ಆಸ್ಪತ್ರೆಯ ವೈದ್ಯರೇ ಬರೆದುಕೊಡುವ ಕೆಲವು ಮಾತ್ರೆಗಳೂ ಅಲ್ಲಿ ಲಭ್ಯವಿಲ್ಲ.ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲೂ ಕೆಲವೇ ಮಾತ್ರೆಗಳು ಲಭ್ಯ ಇವೆ. ರೋಗಿಗಳು ಮಾತ್ರೆಗಳಿಗಾಗಿ ದಿನವಿಡೀ ಸುತ್ತಬೇಕಾಗಿ ಬಂದಿದೆ. ಒಂದು ವರ್ಷದಿಂದ ಸಮಸ್ಯೆ ಹೆಚ್ಚಾಗಿದೆ. ಆದರೂ ಆಯುಷ್ ಇಲಾಖೆ ಗಮನ ಹರಿಸಿಲ್ಲ' ಎಂದು ಅವರು ದೂರಿದ್ದಾರೆ.
'ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ವರದಿಯನ್ನು ಆಯುಷ್ ಇಲಾಖೆಯು ರೋಗಿಗಳಿಗೆ ನೀಡುತ್ತಿಲ್ಲ. ಪ್ರಶ್ನಿಸಿದರೆ, ಮೊಬೈಲ್ನಲ್ಲಿ ಫೋಟೊ ತೆಗೆದುಕೊಳ್ಳಿ. ಮುದ್ರಿಸಲು ನಮ್ಮಲ್ಲಿ ಪೇಪರ್ ಇಲ್ಲ ಎಂದು ಹೇಳುತ್ತಾರೆ ಎಂದು ಜನ ದೂರುತ್ತಿದ್ದಾರೆ. ಈ ಆಸ್ಪತ್ರೆಗಳಿಗೆ ಜಿಲ್ಲೆಯ ದೂರ ದೂರದ ಊರುಗಳಿಂದ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಬರುತ್ತಾರೆ. ಇಂತಹ ಅವ್ಯವಸ್ಥೆಯಿಂದಾಗಿ ಅವರೆಲ್ಲರಿಗೂ ಸೇರಿದಂತೆ ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಕ್ಷೇತ್ರದಲ್ಲಿಯೇ ಹೀಗಾದರೆ ಇನ್ನು ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದು?
ಕೂಡಲೇ ಈ ಅವ್ಯವಸ್ಥೆಗೆ ಅಂತ್ಯ ಹಾಕಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರದ ಸಮಸ್ಯೆ ಹೀಗಾದರೆ ರಾಜ್ಯದಲ್ಲಿ ಈಗ ಅಂಗನವಾಡಿ ಕಾರ್ಯಕರ್ತೆಯರದ್ದು, ಎಲ್ಲಾ ಕೆಲಸ ಮಾಡಬೇಕು ಆದರೆ ವೇತನ ಮಾತ್ರ ಇಲ್ಲ ಎಂಬಂತಹ ನೋವಿನ ಪರಿಸ್ಥಿತಿ. ಅದರ ನಡುವೆ ಪೌಷ್ಚಿಕಾಂಶದ ಕೊರತೆ ನೀಗಿಸುವ ಸಲುವಾಗಿ ಅಂಗನವಾಡಿ ಮಕ್ಕಳಿಗೆ ಜಾರಿಗೆ ತಂದಿರುವ ಪೋಷಣ್ ಅಭಿಯಾನದ ಮೊಟ್ಟೆಯಲ್ಲೂ ಗೋಲ್ ಮಾಲ್. ರಾಜ್ಯವನ್ನು ಇಂತಹ ಗೊಂದಲದ ಸ್ಥಿತಿಗೆ ತಂದ ಕಾಂಗ್ರೆಸ್ ಸರಕಾರಕ್ಕೆ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ಅಧಿಕಾರ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.