ಬೈಂದೂರು, ಆ.12(DaijiworldNews/AA): ಒಂದು ಕಡೆ ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ, ಜೆಡಿಎಸ್ ಮೈಸೂರು ಛಲೋ ಯಾತ್ರೆ ನಡೆಸುತ್ತಿದ್ದರೆ ಇತ್ತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎನ್ನುವ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ಶಾಸಕರ ಜನತಾ ಕಾರ್ಯಾಲಯಗಳಲ್ಲಿ ಅಧಿಕಾರಿಗಳ ಸಭೆ ಕರೆದರೆ ಅಧಿಕಾರಿಗಳು ಭಾಗವಹಿಸಬಾರದು ಎಂದು ಉಡುಪಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಇದರಿಂದಾಗಿ ಬೈಂದೂರಿನಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷ ಭಿನ್ನಾಭಿಪ್ರಾಯಕ್ಕೆ ತಿರುಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗುರುರಾಜ್ ಗಂಟಿಹೊಳೆ, ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪ್ಪುಂದದ ಕಾರ್ಯಕರ್ತ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗಧಿಯಾಗಿತ್ತು. ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾರದೆ ಇರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಯ ಹಕ್ಕನ್ನು ಜಿಲ್ಲಾಧಿಕಾರಿಗಳು ಕಸಿದುಕೊಂಡಿದ್ದು, ಈ ಬಗ್ಗೆ ನ್ಯಾಯಕ್ಕಾಗಿ ಬೈಂದೂರು ತಾಲೂಕು ಕಚೇರಿ ಎದುರು ಸೋಮವಾರ ಸಂಜೆ 5 ಗಂಟೆಯಿಂದ ನ್ಯಾಯಕ್ಕಾಗಿ ಆಹೋರಾತ್ರಿ ಧರಣಿ ಕುಳಿತುಕೊಳ್ಳುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಶಾಸಕರ ಬೆಂಬಲಕ್ಕೆ ನೂರಾರು ಕಾರ್ಯಕರ್ತರು ಬೈಂದೂರಿನಲ್ಲಿ ಜಮಾಯಿಸಿದ್ದಾರೆ. ಒಟ್ಟಾರೆಯಾಗಿ ಬೈಂದೂರಿನಲ್ಲಿ ಆರಂಭಗೊಳ್ಳುತ್ತಿರುವ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಮರ ಇಡೀ ರಾಜ್ಯದಾದ್ಯಂತ ಹರಡಿ ಆಕ್ರೋಶಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ.